Advertisement

ಕಂಟೇನ್ಮೆಂಟ್‌ ಪ್ರದೇಶಕ್ಕೆ ಡಿಸಿ ಭೇಟಿ

07:10 AM Jun 05, 2020 | Suhan S |

ವಿಜಯಪುರ: ಜಿಲ್ಲೆಯ ಕಂಟೇನ್ಮೆಂಟ್‌ ವಲಯಗಳಲ್ಲಿ ಆರೋಗ್ಯ ಸಮೀಕ್ಷೆಗಾಗಿ ಆಗಮಿಸುವ ತಂಡಗಳಿಗೆ ಸಮರ್ಪಕ ಮತ್ತು ವಸ್ತುನಿಷ್ಠ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸಲಹೆ ನೀಡಿದ್ದಾರೆ.

Advertisement

ಗುರುವಾರ ನಗರದ ಅಲ್ಲಾಪುರ ಬೇಸ್‌ ಹಾಗೂ ಪೈಲ್ವಾನ್‌ ಗಲ್ಲಿ ಕಂಟೇನ್ಮೆಂಟ್‌ ವಲಯಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಾಲೋಚಿಸಿದ ಅವರು, ಕೋವಿಡ್‌-19 ಅಪಾಯಕಾರಿ ಮತ್ತು ಸಾಂಕ್ರಾಮಿಕ ರೋಗವಾಗಿದೆ. ಹೀಗಾಗಿ ಎಲ್ಲರೂ ಒಗ್ಗೂಡಿ ರೋಗದ ವಿರುದ್ಧ ಹೋರಾಡಬೇಕಿದೆ. ಹೀಗಾಗಿ ಕಂಟೇನ್ಮೆಂಟ್‌ ಪ್ರದೇಶದಲ್ಲಿ ಆರೋಗ್ಯ ಸಮೀಕ್ಷೆಗೆ ಪ್ರತಿ ಮನೆಗೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಿ ಎಂದು ಕೋರಿದರು.

ಜಿಲ್ಲೆಯ ಕಂಟೇನ್ಮೆಂಟ್‌ ವಲಯಗಳಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವ ಸಹಾಯ ಗುಂಪುಗಳು ಮತ್ತು ಸಮುದಾಯ ಕಾರ್ಯಕರ್ತರು ಕೈ ಜೋಡಿಸಿ ಸೂಕ್ತ ಆರೋಗ್ಯ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರು ಕೂಡಾ ಯಾವುದೇ ರೀತಿ ಕಾನೂನಿನ ರಿತ್ಯ ಕ್ರಮಕ್ಕೆ ಅವಕಾಶ ನೀಡದೆ ತೀವ್ರ ಉಸಿರಾಟ ತೊಂದರೆ, ನೆಗಡಿ, ಕೆಮ್ಮು, ಜ್ವರದ ಬಗ್ಗೆ ವಸ್ತುನಿಷ್ಠ ಮಾಹಿತಿ ನೀಡುವಂತೆ ಸೂಚಿಸಿದರು. ಕೋವಿಡ್‌ ರೋಗದ ಲಕ್ಷಣ ಹೊಂದಿದವರು ಯಾವುದೇ ಸಂದರ್ಭದಲ್ಲಿ ಕಂಟೇನ್ಮೆಂಟ್‌ ವಲಯದ ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಚಿಕಿತ್ಸೆ ಪಡೆಯುವಂತಿಲ್ಲ. ತಕ್ಷಣ ಆರೋಗ್ಯ ಸಮೀಕ್ಷಾ ತಂಡಕ್ಕೆ ಅಥವಾ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಕಂಟೇನ್ಮೆಂಟ್‌ ವಲಯಗಳಲ್ಲಿನ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಲಾಗುವುದು. ಅವಶ್ಯಕ ಆಹಾರ ಕಿಟ್‌ಗಳನ್ನು ಪೂರೈಸಲಾಗುವುದು. ಶೌಚಾಲಯಗಳ ನಿರ್ಮಾಣಕ್ಕೆ ಪಾಲಿಕೆ ಆಯುಕ್ತರಿಂದ ಸೂಕ್ತ ಕ್ರಮ ಆಗಲಿದೆ ಎಂದ ಅವರು, ಸಾರ್ವಜನಿಕರು ಯಾವುದೆ ರೀತಿ ತಪ್ಪು ಮಾಹಿತಿ ನೀಡದೆ ಆರೋಗ್ಯ ಸಮೀಕ್ಷಾ ತಂಡಗಳಿಗೆ ಅಧಿಕೃತ ಮಾಹಿತಿ ನೀಡಿ ಕೋವಿಡ್‌-19 ನಿಯಂತ್ರಣಕ್ಕೆ ನೆರವಾಗುವಂತೆ ಸಲಹೆ ನೀಡಿದರು.

ಎಸ್ಪಿ ಅನುಪಮ್‌ ಅಗರವಾಲ್‌ ಮಾತನಾಡಿ, ಕಂಟೇನ್ಮೆಂಟ್‌ ವಲಯಗಳಲ್ಲಿನ ಸಾರ್ವಜನಿಕರು ಯಾವುದೇ ಪರಿಸ್ಥಿತಿಯಲ್ಲಿ ಮನೆಗಳಿಂದ ಹೊರಗೆ ಬಂದು ತಿರುಗಾಡಬಾರದು. ಆರೋಗ್ಯ ಸಮೀಕ್ಷೆಗೆ ಬರುವ ತಂಡಗಳಿಗೆ ಅವಶ್ಯಕ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಯಾವುದೆ ರೀತಿ ತಪ್ಪು ಮಾಹಿತಿ ನೀಡುವುದಾಗಲಿ, ಅಸಹಕಾರ ಕಂಡು ಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ಸಮುದಾಯ ಕಾರ್ಯಕರ್ತರು, ಸ್ವ ಸಹಾಯ ಗುಂಪುಗಳ ಸದಸ್ಯರು ಸ್ವಯಂ ಪ್ರೇರಣೆಯಿಂದ ಆರೋಗ್ಯ ಸಮೀಕ್ಷಾ ತಂಡಗಳಿಗೆ ಸಹಕರಿಸುವುದಾಗಿ ಕಂಟೇನ್ಮೆಂಟ್‌ ಪ್ರದೇಶದ ಪ್ರಮುಖರು ಸಮ್ಮತಿ ಸೂಚಿಸಿದರು. ಡಿವೈಎಸ್‌ಪಿ ಲಕ್ಷ್ಮೀನಾರಾಯಣ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆಯ ಡಾ| ಮುಕುಂದ ಗಲಗಲಿ, ತಾಲೂಕು ಆರೋಗ್ಯಾಧಿಕಾರಿ ಡಾ| ಕವಿತಾ, ಪಿಎಸೈ ರಾಜೇಶ ಚವ್ಹಾಣ, ಪೈಲ್ವಾನ್‌ ಗಲ್ಲಿ ಜಮಾತ್‌ ಮುಖ್ಯಸ್ಥ ಮಹೇಬೂಬ್‌ ಪಾಷಾ ಹಕಿಂ, ಪೀಟರ್‌ ಅಲೆಜ್ಸಾಂಡರ್‌, ಡಾ| ಝೆನಂತ್‌, ಡಾ| ಗುಂದಬಾವಡಿ, ಡಾ| ಬಾಲಕೃಷ್ಣ, ಡಾ| ಸಂತೋಷ ಶೆಟ್ಟಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next