ವಿಟ್ಲ: ಅನೇಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಗ್ರಾಮ ಸಭೆಯಲ್ಲಿ ಚರ್ಚಿಸಿ, ಜಿಲ್ಲಾ ಮಟ್ಟಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅಷ್ಟೂ ಸಮಸ್ಯೆಗಳಿಗೆ ಪರಿಹಾರಗಳನ್ನು ಮಂಗಳೂರಿನಿಂದ ನೀಡಲಾಗುವುದಿಲ್ಲ. ಅಹವಾಲು ಸ್ವೀಕಾರಕ್ಕೆ ಗ್ರಾಮಕ್ಕೆ ಬಂದಾಗ ಸಮಸ್ಯೆಗಳ ವಾಸ್ತವತೆಯನ್ನು ತಿಳಿದು ಸಮಸ್ಯೆಯನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲು ಸಾಧ್ಯವಾಗುತ್ತದೆ. ಗ್ರಾಮ ಸಭೆಯಲ್ಲಿ ಕೇವಲ ನಿರ್ಣಯವಾಗುತ್ತದೆ. ಆದರೆ ಗ್ರಾಮ ವಾಸ್ತವ್ಯದಲ್ಲಿ ಪರಿಹಾರ ಲಭಿಸುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಸಮರ್ಥಿಸಿದರು.
ಅವರು ಶನಿವಾರ ವಿಟ್ಲಪಟ್ನೂರು ಗ್ರಾಮದ ಕೊಡಂಗಾಯಿ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ನಡೆದ ಜಿಲ್ಲಾಧಿ ಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಘೋಷವಾಕ್ಯವುಳ್ಳ ಗ್ರಾಮವಾಸ್ತವ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಕಡತಗಳನ್ನು ಸಿದ್ಧ ಪಡಿಸುವ ಕಾರ್ಯ ಮಾಡಲಾಗುವುದು. ಬಹಳಷ್ಟು ಅರ್ಜಿಗಳು ಬಿಪಿಎಲ್ ಪಡಿತರ ಚೀಟಿ, ಸಂಧ್ಯಾ ಸುರûಾ, ಅಂಗವಿಕಲರ ವೇತನ, ವಿಧವಾ ವೇತನ, ಮನಸ್ವಿನಿ, ಮೈತ್ರೇಯಿ ಸೇರಿ ಎಲ್ಲ ಯೋಜನೆಗಳಿಗೆ ಸಂಬಂಧಿಸಿದ್ದಾಗಿದೆ. ಎಲ್ಲ ಕಡತಗಳನ್ನು ಪರಿಶೀಲಿಸಲಾಗುವುದು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಯೋಜನೆಯು ಫಲದಾಯಕವಾಗುತ್ತದೆ. ತೀರಾ ಹಳ್ಳಿಪ್ರದೇಶವನ್ನು ಆರಂಭದಲ್ಲಿ ಆಯ್ಕೆ ಮಾಡಿ, ಅಲ್ಲಿನ ಜನರ ಕಷ್ಟ ಸುಖಗಳನ್ನು ವಿಚಾರಿಸಿ, ಪರಿಶೀಲಿಸಿ, ಪರಿಹರಿಸುವ ಅಗತ್ಯವಿದೆ. ಅದನ್ನು ಸ್ವತಃ ಜಿಲ್ಲಾಧಿಕಾರಿಗಳೇ ನೆರವೇರಿಸುತ್ತಿರುವುದು ಅರ್ಥಪೂರ್ಣ ಎಂದರು.
ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿ ಕಾರಿ ಡಾ| ಕುಮಾರ್, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ತಾ.ಪಂ. ಕಾರ್ಯನಿರ್ವಹಣಾ ಧಿಕಾರಿ ರಾಜಣ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಶೋಭಾ ರೈ, ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಶಂಕರಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ ಸ್ವಾಗತಿಸಿದರು. ತಹಶೀಲ್ದಾರ್ ರಶ್ಮೀ ಎಸ್. ಆರ್. ಪ್ರಸ್ತಾವನೆಗೈದರು. ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾಧಿಕಾರಿಗಾಗಿ ಕಾದು ಸುಸ್ತಾದ ಗ್ರಾಮಸ್ಥರು :
ವಿಟ್ಲಪಟ್ನೂರು ಗ್ರಾಮದಲ್ಲಿಡಿಸಿ ಡಾ| ಕೆ.ವಿ.ರಾಜೇಂದ್ರ ಅವರ ಗ್ರಾಮವಾಸ್ತವ್ಯವನ್ನು ಮಾ.20ರಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ನಿಗದಿಪಡಿಸಲಾಗಿತ್ತು. ಆದರೆ ಜಿಲ್ಲಾ ಧಿಕಾರಿ ಆಗಮಿಸುವಾಗ 11 ಗಂಟೆಯಾಗುತ್ತದೆ ಎಂದು ಪತ್ರಕರ್ತರಿಗೆ ಶುಕ್ರವಾರ ತಿಳಿಸಲಾಗಿತ್ತು. ಆದರೆ ಶನಿವಾರ ಬೆಳಗ್ಗೆ ಜಿಲ್ಲಾ ಧಿಕಾರಿ ಆಗಮಿಸುವಾಗ 11.30 ಆಗಲಿದೆ ಎಂದು ಹೇಳಲಾಗಿತ್ತು. ಗಂಟೆ 12 ಆದರೂ ಜಿಲ್ಲಾ ಧಿಕಾರಿ ಆಗಮಿಸಲಿಲ್ಲ. 12.45ರ ಬಳಿಕ ಆಗಮಿಸಿದ ಜಿಲ್ಲಾಧಿಕಾರಿ ಅವರು ಪ್ರವಾಸೋದ್ಯಮ ಇಲಾಖೆಯ ಸಚಿವರು ಆಗಮಿಸಿದ್ದರಿಂದ ಅತೀ ಅಗತ್ಯವಾದ ಸಭೆಯನ್ನು ಮುಗಿಸಿ ಆಗಮಿಸುವಾಗ ತಡವಾಗಿದೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಮತ್ತು ರಾತ್ರಿಯಾದರೂ ಇಲ್ಲಿನ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ತೆರಳುತ್ತೇನೆ ಎಂದು ಭರವಸೆ ನೀಡಿದರು.
120 ಅರ್ಜಿ :
ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆ ಗಳಿಗೆ ಗ್ರಾಮಸ್ಥರು ನೀಡಿದ ಅರ್ಜಿಗಳ ಸಂಖ್ಯೆ 120. ಅದರಲ್ಲಿ 30 ಅರ್ಜಿಗಳು ಇತ್ಯರ್ಥಗೊಂಡಿದ್ದು ಇನ್ನುಳಿದ 90 ಅರ್ಜಿಗಳ ಇತ್ಯರ್ಥವಾಗಿಲ್ಲ. ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಇತ್ಯರ್ಥಗೊಂಡಿವೆ.