Advertisement
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಳ್ಳಿ ಭೇಟಿಯಲ್ಲಿ ಶಾಲೆ- ಅಂಗನವಾಡಿ, ಗಿರಿಜನ ಹಾಡಿಗಳ ಭೇಟಿ, ಸಾವಿರ ಕಂಬದ ಪುರಾತನ ಕಾಶಿಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರ ಕಾಮಗಾರಿಪರಿಶೀಲನೆ, ತರಿಕಲ್‌ನ ಬೀದಿಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ಸಂಚಾರ ನಡೆಸಿ ಸಮಸ್ಯೆಯನ್ನರಿತರು.
Related Articles
Advertisement
ಜಿಲ್ಲಾಧಿಕಾರಿಗಳು ಆದ್ಯತೆ ಮೇರೆಗೆ ಈ ಭಾಗದ ಜಮೀನಿನ ದುರಸ್ತು ಮಾಡಲಾಗುತ್ತಿದೆ. ಒತ್ತುವರಿ ತೆರವಿಗೆ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದೆಂದರು. ಹಳ್ಳದಕೊಪ್ಪಲುಹಾಡಿಯ ವೃದ್ಧೆ ಮಾಕಮ್ಮ, ತಮ್ಮ ಜಮೀನು ಕಾಣೆಯಾಗಿದ್ದು ಹುಡುಕಿಕೊಡಿ, ದನ ಮೇಯಿಸಲು ತೊಂದರೆಯಾಗಿದೆ, ಓದಿರುವ
ಮಕ್ಕಳಿದ್ದಾರೆ ಕೆಲಸವಿಲ್ಲ, ಹಾಡಿಯ ಹಲವರಿಗೆ ಭೂಮಿ ಇಲ್ಲ. ಜಮೀನು ನೀಡುವಂತೆ ಕೋರಿದರು. ಆದರೆ ಇವರಿಗೆ ಯಾವುದೇ ಉತ್ತರ ಸಿಗಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ಸೂಚನೆಯಂತೆ ಮೊದಲ ಗ್ರಾಮ ವಾಸ್ತವ್ಯ ನಡೆದಿದ್ದು, ಇಲ್ಲಿ ಪೋಡಿ ಪ್ರಕರಣ, ಒತ್ತುವರಿ ಸೇರಿದಂತೆ ಭೂ ಸಮಸ್ಯೆಗಳೆ ಹೆಚ್ಚಿವೆ. ಸ್ವ ಮಿತ್ರ ಯೋಜನೆಯಡಿ ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ 3 ಸಾವಿರ ಕೆರೆಗಳಿದ್ದು, ಹಂತಹಂತವಾಗಿ ಒತ್ತುವರಿ ತೆರವುಗೊಳಿಸ ಲಾಗುವುದು ಎಂದರು.
ಸ್ವಚ್ಛವಾದ ಗ್ರಾಮ: ಜಿಲ್ಲಾಧಿಕಾರಿ ಭೇಟಿಯಿಂದ ಶಾಲಾ ಆವರಣ, ಗ್ರಾಮವು ಸ್ವಚ್ಛಗೊಂಡಿತು. ಶಾಲೆಗೆ ಶೌಚಾಲಯ ನಿರ್ಮಾಣವಾಯಿತು. ಆಧಾರ್ ಕಾರ್ಡ್ ತಿದ್ದುಪಡಿ, ಪಡಿತರ ಕಾರ್ಡ್‌ಗೆ ಅರ್ಜಿ ಸ್ವೀಕಾರ ಹಾಗೂ ಮಾಸಾಶನ ಮಂಜೂರು ವ್ಯವಸ್ಥೆ ಜೊತೆಗೆ 20 ವರ್ಷಗಳಿಂದ ನೆನೆಗುದಿಗೆ ಬಿದಿದ್ದ ನಿವೇಶನ ವಿತರಣೆಗೂ ಚಾಲನೆ ದೊರೆಯಿತು.
625 ಅರ್ಜಿಗಳಿಗೆ ಪರಿಹಾರ: ಗ್ರಾಮ ವಾಸ್ತವ್ಯದಲ್ಲಿ ಒಟ್ಟಾರೆ 685 ಅರ್ಜಿಗಳು ಬಂದಿದ್ದು, ಈ ಪೈಕಿ 261 ಆಧಾರ್ ಕಾರ್ಡ್, 21 ಪಡಿತರ ಕಾರ್ಡ್, 30 ಮಸಾಶನ ಪತ್ರ, 161 ವಿವಿಧ ಮಸಾಶನ ಪತ್ರಗಳು 32 ಮಂದಿಗೆ ನಿವೇಶನ ಹಕ್ಕು ಪತ್ರ ವಿತರಣೆ ಸರ್ವೆ ನಂ.43ರಲ್ಲಿ 90 ಮಂದಿಯ ಜಮೀನು ದುರಸ್ತು ಕಾರ್ಯ ನಡೆದಿದೆ. ವಿವಿಧ ಹಾಡಿಗಳಿಗೆ ಸಂಬಂಧಿಸಿದಂತೆ 54ಅರ್ಜಿಗಳು ಬಂದಿವೆ ಎಂದು ತಹಶೀಲ್ದಾರ್ ಬಸವರಾಜು ಮಾಹಿತಿ ನೀಡಿದ್ದಾರೆ. ಈ ವೇಳೆ ತಾಪಂ ಇಒ ಗಿರೀಶ್, ಗ್ರಾಮ ವಾಸ್ತವ್ಯದಸಂಪೂರ್ಣ ಜವಾಬ್ದಾರಿ ಹೊತ್ತು ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಜಿಪಂ ಸಿಇಒ ಯೋಗೇಶ್, ಸದಸ್ಯ ಸುರೇಂದ್ರ, ಧರ್ಮಾಪುರ ಗ್ರಾಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ತುಳಸಮ್ಮ, ಪಿಡಿಒ ರೂಪಶ್ರೀ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು, ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.
ಪೋಸ್ಟ್ ಮ್ಯಾನ್ ಕೆಲಸ ಬೇಡ: ಶಾಸಕ :
ಶಾಸಕ ಎಚ್.ಪಿ.ಮಂಜುನಾಥ್ ತರಿಕಲ್ ಗ್ರಾಮದಲ್ಲಿ 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಿವೇಶನದ ಹಕ್ಕುಪತ್ರವನ್ನು ವಿತರಿಸಿ ಮಾತನಾಡಿ, ಸರ್ಕಾರ ಉತ್ತಮ ಯೋಜನೆ ಜಾರಿಗೆ ತಂದಿದೆ. ಆದರೆ, ಈ ಕಾರ್ಯಕ್ರಮ ಕೇವಲ ಪೋಸ್ಟ್ ಮ್ಯಾನ್ ಕೆಲಸ ಆಗಬಾರದು. ಜಿಲ್ಲಾಧಿಕಾರಿಗಳು ಭೇಟಿ ನೀಡಿರುವುದರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಈ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ. ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಗ್ರಾಮವನ್ನು ಆಯ್ಕೆಮಾಡಬೇಕಿತ್ತು. ತಾವು ಪ್ರತಿ ಪಂಚಾಯ್ತಿ ಕೇಂದ್ರದಲ್ಲೂ ತಾಲೂಕು ಆಡಳಿತ ಮನೆಬಾಗಿಲಿಗೆ ಕಾರ್ಯಕ್ರಮ ರೂಪಿಸಿದ್ದಾಗಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಇದೀಗ ಜಿಲ್ಲಾಧಿಕಾರಿ ಭೇಟಿಯಿಂದ ಶಾಲೆ ಮತ್ತಿತರ ಕೆಲಸಗಳು ಆಗುತ್ತವೆ ಎನ್ನುವುದಾದರೆ ವರ್ಷಪೂರ್ತಿ ಆಗಾಗ ಭೇಟಿ ನೀಡಿ ಎಂದು ಸಲಹೆ ನೀಡಿದರು.
ಹಾಡಿ ಜನರ ಸಮಸ್ಯೆಗೆ ಪರಿಹಾರದ ಭರವಸೆ :
ತರೀಕಲ್ಲು ಗ್ರಾಮದ ಸಮೀಪದಲ್ಲಿರುವ ರಂಗಯ್ಯನಕೊಪ್ಪಲು ಹಾಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಹಾಡಿಯಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆಯನ್ನು ಸುದೀರ್ಘವಾಗಿ ಆಲಿಸಿದರು. ಈ ವೇಳೆ ಮನೆ ನಿರ್ಮಾಣ, ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಆದಿವಾಸಿಗಳು ಮನವಿ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನುಪಟ್ಟಿಮಾಡಿ, ಶೀಘ್ರವೇ ಸಮಸ್ಯೆ ಬಗೆಹರಿಸಿ ವರದಿ ನಿಡುವಂತೆ ಸೂಚನೆ ನೀಡಿದರು. ನಂತರ ತರಿಕಲ್ಲು ಗ್ರಾಮದ ಸಾರ್ವಜನಿಕ ಸ್ಮಾಶಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಗ್ರಾಮದಲ್ಲಿ ವಾಸಿಸುವ ಜನಸಂಖ್ಯೆ ಅನುಗುಣವಾಗಿ ಸ್ಮಶಾನದ ಜಾಗ ನೀಡಬೇಕು. ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡ ಓದಲು ತಡವರಿಸಿದ ಮಕ್ಕಳು :
ತರಿಕಲ್ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ಮಕ್ಕಳನ್ನು ಗಣಿತದ ಪ್ರಶ್ನೆ ಕೇಳಿದರು. ಕನ್ನಡ, ಇಂಗ್ಲಿಷ್‌ನ್ನು ಓದಲು ತಡವರಿಸಿದ್ದರಿಂದ ಜಿಲ್ಲಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದು ಕಂಡು ಬಂತು. ಇನ್ನು ಮೊರಾರ್ಜಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರೌಢಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಮಕ್ಕಳಿಗೆ ಗಣಿತದ ಪಾಠ ಹೇಳಿಕೊಟ್ಟರು.