ಕೊಪ್ಪಳ: ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಧಾಗಾರಗಳನ್ನು ಸ್ಥಾಪಿಸಿ ನಿಯಮಾನುಸಾರ ವಧಾಗಾರಗಳನ್ನು ನಿರ್ವಹಿಸುವಂತೆ ಕ್ರಮ ಕೈಗೊಳ್ಳಿ ಎಂದು ಡಿಸಿ ವಿಕಾಸ್ ಕಿಶೋರ್ ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಪ್ರಾಣಿ ಕಲ್ಯಾಣ ಹಾಗೂ ದೌರ್ಜನ್ಯ ತಡೆ ಸಮಿತಿಯಿಂದ ಪ್ರಾಣಿ ಹಿಂಸೆ ತಡೆಗಟ್ಟಲು ಜಾರಿಯಲ್ಲಿರುವ ಕಾನೂನುಗಳ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೇವಲ ಒಂದು ವಧಾಗಾರವಿದ್ದು, ಜಿಲ್ಲೆಯ ಬೇರೆ ಭಾಗಗಳಲ್ಲಿ ವಧಾಗಾರಗಳಿಲ್ಲ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ವೈಜ್ಞಾನಿಕವಾಗಿ, ಸರ್ಕಾರದ ನಿಯಮಾನುಸಾರ ವಧಾಗಾರ ಸ್ಥಾಪಿಸುವ ಕುರಿತು ಸಹಾಯಕ ನಿರ್ದೇಶಕರು ಮತ್ತು ಸ್ಥಳೀಯ ಸಂಸ್ಥೆಗಳು ಗ್ರಾಮ ಹಾಗೂ ತಾಲೂಕು ಮಟ್ಟದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ವಧಾಗಾರ ಸ್ಥಾಪನೆ ಕುರಿತು ಒಂದು ವಾರದಲ್ಲಿ ವರದಿ ಸಲ್ಲಿಸಿ. ವಧಾಗಾರ ಸ್ಥಾಪನೆ ನಂತರ ಅಲ್ಲಿ ನೈರ್ಮಲಿಕರಣ, ಶುಚಿತ್ವ ಕಾಪಾಡಿಕೊಳ್ಳುವುದು ಕಡ್ಡಾಯ.
ಆದ್ದರಿಂದ ವಧಾಗಾರ ನಿರ್ವಹಣೆ ಸಿಬ್ಬಂದಿಗೆ ಈ ಕುರಿತು ಅಗತ್ಯ ಮಾಹಿತಿ ನೀಡಿ ಎಂದರು. ಮನೆ ಮುಂದೆ ಅಥವಾ ಮನೆಯ ಹತ್ತಿರ ಪ್ರಾಣಿ ಹತ್ಯೆ ಮಾಡದೇ ನಿಗದಿತ ವಧಾಗಾರದಲ್ಲಿ, ಪಶುವೈದ್ಯರ ಪ್ರಮಾಣ ಪತ್ರದ ಆಧಾರದಲ್ಲಿ ಪ್ರಾಣಿ ಮಾಂಸ ಮನುಷ್ಯರ ಆಹಾರಕ್ಕಾಗಿ ಯೋಗ್ಯವಾಗಿದ್ದರೆ ಮಾತ್ರ ಅಂತಹ ಪ್ರಾಣಿಗಳನ್ನು ವಧೆ ಮಾಡಿ ಆಹಾರಕ್ಕಾಗಿ ಬಳಸಿಕೊಳ್ಳಬಹುದು ಎಂದರು. ಈ ವೇಳೆ ಎಸ್ಪಿ ಜಿ. ಸಂಗೀತಾ, ಅಧಿ ಕಾರಿಗಳಾದ ಶರಣಬಸವರಾಜ, ಸಿದ್ರಾಮೇಶ್ವರ, ಬಸಯ್ಯ ಸಾಲಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವಿವಿಧ ಹಬ್ಬಗಳ ವೇಳೆ ಸಾರ್ವಜನಿಕರು ಮನೆ ಮುಂದೆ ಅಥವಾ ತಮ್ಮ ಓಣಿಗಳಲ್ಲಿ ಕುರಿ, ಕೋಣದಂತಹ ಪ್ರಾಣಿಗಳನ್ನು ಹತ್ಯೆ ಮಾಡಿ ಆಹಾರಕ್ಕಾಗಿ ಬಳಸುತ್ತಾರೆ. ಕೆಲ ಸಮುದಾಯದ ಹಬ್ಬಗಳಲ್ಲಿ ಒಂಟೆಗಳನ್ನೂ ಆಹಾರಕ್ಕಾಗಿ ಬಲಿ ಕೊಡಲಾಗುತ್ತದೆ. ಅದು ಕಾನೂನು ಬಾಹಿರ.
ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ