ತುಮಕೂರು: ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದ, ತುಮಕೂರು ನಗರದ ಪ್ರದೇಶಾಧಾರಿತ ಅಭಿವೃದ್ಧಿ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಸ್ಮಾರ್ಟ್‌ರಸ್ತೆಗಳನ್ನಾಗಿ ಪರಿವರ್ತಿಸಲು 245.42 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಈ ರಸ್ತೆಗೆ ಹಾನಿ ಉಂಟಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಎಚ್ಚರಿಸಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಸ್ಮಾರ್ಟ್‌ರಸ್ತೆಗಳಲ್ಲಿ ಉತ್ತಮ ಪಾದಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಇತರೆ ಇಲಾಖೆಗಳಿಂದ ಸಾರ್ವಜನಿಕ ಸೇವೆಗಾಗಿ ಅಳವಡಿಸುವ ಕೇಬಲ್ ಮತ್ತು ಇತರೆ ವ್ಯವಸ್ಥೆಗಳಿಗೆ ಅಂಡರ್‌ಗ್ರೌಂಡ್ ಡಕ್ಟಿಂಗ್ ಮಾಡಿ, ಬಹು ಕ್ರಿಯಾತ್ಮಕ ವಲಯ ರೂಪಿಸಲಾಗಿದೆ ಎಂದರು.
ಕಾಮಗಾರಿಗೆ ಹಾನಿಯಾಗಬಾರದು: ಈ ಪ್ರದೇಶವನ್ನು ಹಸಿರು ವಲಯ ಮಾಡಿದ್ದು ಹಲವು ಅನುಕೂಲಗಳನ್ನು ಒಳಗೊಂಡಿರುವ ಈ ರಸ್ತೆ ಕಾಮಗಾರಿಗೆ ಇತರೆ ಇಲಾಖೆಗಳಿಂದ ಹಾನಿ ಉಂಟಾದಲ್ಲಿ ಶಿಸ್ತು ಕ್ರಮ ಕೈಗೊಳ್ಳ ಲಾಗುವುದು ಎಂದು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಪಡಿಸಲು ಪರಿಗಣಿಸಿರುವ ಕಾಮಗಾರಿಗಳ ಸ್ಥಳದಲ್ಲಿ ಇತರೆ ಇಲಾಖೆಗಳಿಂದ ಕೈಗೊಳ್ಳುವ ಕಾಮಗಾರಿಗಳನ್ನು ನಿರ್ವಹಿಸುವಾಗ ಯಾವುದೇ ಅಭಿವೃದ್ಧಿಪಡಿ ಸುತ್ತಿರುವಕಾಮಗಾರಿಗಳಿಗೆ ಹಾನಿ ಉಂಟಾಗಬಾರದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಪೂರ್ವಾನುಮತಿ ಪಡೆದು ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ: ಪ್ರಸ್ತುತ ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ರಸ್ತೆಗಳಾದ ಎಫ್ಎಂಸಿ ಕಾರಿಯಪ್ಪ ರಸ್ತೆ, ಬಸ್ ನಿಲ್ದಾಣದ ದಕ್ಷಿಣ ರಸ್ತೆ ಕೆಎಸ್‌ಆರ್‌ಟಿಸಿ ಡಿಪೋ, ಬಸ್ ನಿಲ್ದಾಣದ ಉತ್ತರ ರಸ್ತೆ ಗುಬ್ಬಿ ವೀರಣ್ಣಕಲಾಮಂದಿರ ರಸ್ತೆ ಹಾಗೂ ಅಶೋಕ ರಸ್ತೆ ಕಾಮಗಾರಿಯು ಪೂರ್ಣಗೊಂಡಿದ್ದು ಪಾದಚಾರಿ ಮಾರ್ಗದ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊರಪೇಟೆ ರಸ್ತೆ, ಎಂ.ಜಿ ರಸ್ತೆ, ವಿವೇಕಾನಂದ ರಸ್ತೆ, ಜೆ.ಸಿ.ರಸ್ತೆ, ಭಗವಾನ್ ಮಹಾವೀರ್ ರಸ್ತೆ, ಮಂಡಿಪೇಟೆ 2ನೇ ಮುಖ್ಯ ರಸ್ತೆ, ಮಂಡಿಪೇಟೆ 1ನೇ ಮುಖ್ಯ ರಸ್ತೆ, ಮಂಡಿಪೇಟೆರಸ್ತೆ , ಚಾಮುಂಡೇಶ್ವರಿ ರಸ್ತೆ, ಡಾ. ರಾಧಾಕೃಷ್ಣ ರಸ್ತೆ ಮತ್ತು ಬಿ.ಹೆಚ್ ರಸ್ತೆಯಲ್ಲಿ ಬಹು ಕ್ರಿಯಾತ್ಮಕ ವಲಯದ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ರಸ್ತೆ ಭಾಗದಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಎಂದು ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಟಿ.ರಂಗಸ್ವಾಮಿ ತಿಳಿಸಿದರು.
ಸಾರ್ವಜನಿಕರ ಸಂಚಾರಕ್ಕೆ ಅಡಚಣೆ:ನಗರದಲ್ಲಿ ಇತರೆ ಇಲಾಖೆಗಳಿಗೆಸಂಬಂಧಿಸಿದ ಕಾಮಗಾರಿಗಳೂ ಸಹ ಪ್ರಗತಿಯಲ್ಲಿದ್ದು, ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಮೇಲ್ಕಂಡ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಸ್ಥಳದಲ್ಲಿ ಇತರೆ ಇಲಾಖೆಗಳಿಂದ ನಿರ್ವಹಿಸುತ್ತಿರುವ ಕಾಮಗಾರಿಗಳನ್ನು ಯಾವುದೇ ಪೂರ್ವಾನುಮತಿ ಪಡೆಯದೆ ಅಭಿವೃದ್ಧಿಪಡಿಸಿದ ರಸ್ತೆ ಭಾಗವನ್ನು ಅಗೆದುಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ತಿಳಿಸಿದರು.
ಆರ್ಥಿಕ ನಷ್ಟ ಮತ್ತು ಸಮಯ ವಿಳಂಬ: ಈ ಕೆಲಸವನ್ನು ಸ್ಮಾರ್ಟ್ ಸಿಟಿ ಕೆಲಸವೆಂದುಬಿಂಬಿಸುವಂತಾಗಿದೆ. ಸ್ಮಾರ್ಟ್ ಸಿಟಿಯ ಮೂಲ ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಅಗೆದ ಭಾಗವನ್ನು ಪುನರ್ ನಿರ್ಮಾಣ ಮಾಡಿ ಕಾರ್ಯನಿರ್ವಹಿಸಲು ಆರ್ಥಿಕ ನಷ್ಟ ಮತ್ತು ಸಮಯ ವಿಳಂಬ ಆಗುತ್ತಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಯಾವುದೇ ಇಲಾಖೆಗಳ ಕಾಮಗಾರಿಗಳು ಬಾಕಿ ಇದ್ದಲ್ಲಿ ನವೆಂಬರ್ 15ರೊಳಗಾಗಿ ಈಗಾಗಲೇ ಅಭಿವೃದ್ಧಿಪಡಿಸಿರುವ ರಸ್ತೆಗಳನ್ನು ಹೊರತುಪಡಿಸಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ರಸ್ತೆ ಅಗೆಯಲು ಅವಕಾಶವಿರುವುದಿಲ್ಲ : ತುಮಕೂರು ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿಗಳನ್ನು ನವೆಂಬರ್ 15ರ ನಂತರ ಯಾವುದೇ ರಸ್ತೆಯನ್ನು ಅಗೆಯಲು ಅವಕಾಶವಿರುವುದಿಲ್ಲ, ಆದಾಗ್ಯೂ ಯಾವುದೇ ರಸ್ತೆ ಅಗೆಯುವ ಅಗತ್ಯತೆ ಇದ್ದಲ್ಲಿ ಈ ಕಚೇರಿ ವತಿಯಿಂದ ಪೂರ್ವಾನುಮತಿ ಪಡೆದುದುರಸ್ತಿಗೆ ತಗಲುವ ವೆಚ್ಚವನ್ನು ಸ್ಮಾರ್ಟ್‌ಸಿಟಿ ಲಿಮಿಟೆಡ್ ಕಚೇರಿಗೆ ಮುಂಚಿತವಾಗಿ ಪಾವತಿಸಿ ನಂತರ ಕೆಲಸ ನಿರ್ವಹಿಸಬೇಕು. ಸ್ಮಾರ್ಟ್ ಸಿಟಿ ಲಿಮಿಟೆಡ್‌ಕಚೇರಿಗೆ ಯಾವುದೇ ಮಾಹಿತಿ ನೀಡದೇಕೆಲಸ ಪ್ರಾರಂಭಿಸಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಮೇಲೆ ಜಿಲ್ಲಾಧಿಕಾರಿಗಳು ಈಗಾಗಲೇ ಸಮನ್ವಯ ಸಭೆಯ ನಡವಳಿಯಲ್ಲಿ ತೀರ್ಮಾನಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಟಿ.ರಂಗಸ್ವಾಮಿ ಎಚ್ಚರಿಸಿದ್ದಾರೆ.