ಶಹಾಬಾದ: ತಾಲೂಕಿನ ಭಂಕೂರ ಗ್ರಾಪಂ ಕೇಂದ್ರದಲ್ಲಿಯೇ ಅಶುದ್ಧ ನೀರು, ಗ್ರಾಮದ ಒಳಗೆ ಬರುವ ಹದಗೆಟ್ಟ ಇಕ್ಕಟ್ಟಾದ ರಸ್ತೆ, ಸಾರ್ವಜನಿಕರಿಗೆ ಹೂಳಲು ಸ್ಮಶಾನವಿಲ್ಲ. ಬಹುತೇಕ ಬಡಾವಣೆಯಲ್ಲಿ ಚರಂಡಿ ಸಮಸ್ಯೆ ತಲೆದೋರಿದ್ದು, ಶನಿವಾರ ಗ್ರಾಮಕ್ಕೆ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿಗಳು ಭಂಕೂರ ಗ್ರಾಮಕ್ಕೆ ಆಗಮಿಸಲಿದ್ದು ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವರೆಂದು ಇಲ್ಲಿನ ಗ್ರಾಮಸ್ಥರು ಅಪಾರ ನಿರೀಕ್ಷೆ ಹೊಂದಿದ್ದಾರೆ.
ಸ್ಮಶಾನದ ಸಮಸ್ಯೆ: ಕಳೆದು ಎರಡು ದಶಕಗಳಿಂದ ಇಲ್ಲಿನ ದೊಡ್ಡದಾದ ಸಮಸ್ಯೆಯೆಂದರೆ ಹೂಳಲು ಸ್ಮಶಾನವಿಲ್ಲ. ಗ್ರಾಮದಲ್ಲಿ ಸುಮಾರು ಹದಿನೈದು ಸಾವಿರ ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ಶವ ಹೂಳಲು ಕೇವಲ 40×60 ಜಾಗವಿದೆ. ಹೀಗಾಗಿ ಯಾರಾದರೂ ಶವ ಹೂಳಬೇಕೆಂದರೆ ಬೇರೆಯವರ ಶವ ತೆಗೆದು ಹೂಳುವ ಪರಿಸ್ಥಿತಿ ಇಲ್ಲಿದೆ.
ಸುಮಾರು 75 ವರ್ಷಗಳಿಗಿಂತಲೂ ಗ್ರಾಮದ ಎಲ್ಲ ಜನರು ಇಲ್ಲಿಯೇ ಶವ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಈಗ ಹೂಳಲು ಹೋದರೆ ಶವದ ಮೂಳೆಗಳೇ ತೇಲುತ್ತವೆ. ಜಮೀನು ಇದ್ದವರು ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಿದರೆ, ಜಮೀನು ಇಲ್ಲದವರು ಈಗಾಗಲೇ ದೇಹದಾನ ಮಾಡಲು ಸುಮಾರು 40ಜನ ಮುಂದಾಗಿದ್ದಾರೆ. ಈಗಾಗಲೇ ಸ್ಮಶಾನ ಭೂಮಿಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹತ್ತಿರ ಅನೇಕ ಬಾರಿ ಗ್ರಾಮಸ್ಥರು ಹೋಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೂ ಯಾರು ಗಮನಹರಿಸಿಲ್ಲ.
ರಸ್ತೆ ಸಮಸ್ಯೆ: ಗ್ರಾಮಕ್ಕೆ ಪ್ರವೇಶ ಮಾಡುವ ಕಮಾನಿನಿಂದ ಗ್ರಾಮದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ ಹಾಳಾಗಿದೆ. ಅಲ್ಲದೇ ಇಕ್ಕಟ್ಟಾದ ರಸ್ತೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಚರಂಡಿ ಸಮಸ್ಯೆ: ಗ್ರಾಮದ ಮುಖ್ಯ ರಸ್ತೆ ಮತ್ತು ಶಾಂತನಗರದ ಹೌಸಿಂಗ್ ಸೊಸೈಟಿ ಬಡಾವಣೆಯಲ್ಲಿ ಒಳಚರಂಡಿ ಕೆಟ್ಟು ಹೋಗಿ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಹೊಲಸು ನೀರು ಹರಿದಾಡುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ನಿದ್ರೆ ಬಾರದಂತಾಗಿದೆ. ಅಲ್ಲದೇ ಸಾಂಕ್ರಾಮಿಕ ರೋಗಗಳು ಉಂಟಾಗುತ್ತಿವೆ.
ಕುಡಿಯುವ ನೀರಿನ ಸಮಸ್ಯೆ: ಗ್ರಾಮದಲ್ಲಿ ಜೀವ ನದಿ ಕಾಗಿಣಾ ನದಿಯಿಂದ ಇಲ್ಲಿನ ಜನರಿಗೆ ನೀರು ಪೂರೈಕೆಯಾಗುತ್ತಿದೆ. ಆದರೆ ಅದು ಕಲುಷಿತವಾಗಿದ್ದು, ಅನೇಕ ರೋಗಗಳು ಉದ್ಭವಿಸುತ್ತಿವೆ. ಆದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು. ಇಲ್ಲಿನ ಜನರಿಗೆ ಶುದ್ಧ ನೀರು ಒದಗಿಸಬೇಕೆಂದು ಹಲವಾರು ಬಾರಿ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಈಗಲಾದರೂ ಇಲ್ಲಿನ ಬಹು ಬೇಡಿಕೆ ಇರುವ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಬಗೆಹರಿಯುವುದೇ ಎಂದು ಜನತೆ ಕಾತುರದಿಂದ ಕಾಯ್ದು ನೋಡುತ್ತಿದ್ದಾರೆ.
–ಮಲ್ಲಿನಾಥ ಪಾಟೀಲ