ಹುಮನಾಬಾದ: ಕೈಗಾರಿಕಾ ಘಟಕದಲ್ಲಿನ ದೊಡ್ಡ ಪ್ರಮಾಣದ ಘಟಕಗಳು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ನಿಯಂತ್ರಣದಲ್ಲಿ ಬರುವುದಿಲ್ಲ. ಪರಿಸರ ಹಾನಿಯುಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪರಿಸರ ಹಾನಿಯುಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಈಗಾಗಲೇ ಇಲ್ಲಿನ ಪರಿಸರ ಇಲಾಖೆ ಅಧಿಕಾರಿಗಳು ವರದಿ ಕಳುಹಿಸಿದ್ದಾರೆ. ಆದರೆ, ಮೇಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕಾಗುತ್ತದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ನಿಯಂತ್ರಿಸಲು ಯಾವುದೇ ಅವಕಾಶವಿಲ್ಲ. ಕೂಡಲೇ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.
ಹುಮನಾಬಾದ ತಾಲೂಕಿನ ಮೂಲಕ ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಸಾಗುತ್ತಿರುವ ಮರಳುಗಾರಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಈಗಾಗಲೇ ಪ್ರತಿಯೊಂದು ತಾಲೂಕಿಗೆ ತಲಾ ಒಂದು ಟಾಸ್ Rಫೋರ್ಸ್ ರಚಿಸಲಾಗಿದೆ. ಅಕ್ರಮ ಮರಳು ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕರ್ತವ್ಯ ನಿರ್ವಹಿಸಲಿದೆ. ನಿರಂತರ ನಿಗಾವಹಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಡಿತರ ಅಕ್ಕಿ ಕಳ್ಳ ಸಂತೆಯಲ್ಲಿ ಮಾರಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿ, ಅಕ್ರಮ ಪಡಿತರ ಅಕ್ಕಿ ಕುರಿತು ದೂರುಗಳು ಬರುವ ಕಡೆಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ದೂರುಗಳು ಬರುವ ಕಡೆಗೆ ಕೂಡಲೇ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.