ಬೈಲಹೊಂಗಲ: ಪಟ್ಟಣದಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗೆ ನಾಗರಿಕರಿಂದ ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಮುತವಾಡದ ಓರ್ವ ವ್ಯಕ್ತಿ ಹೊಲದ ಪೋಡಿ ಮಾಡಿಸಲಿಕ್ಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಕಾರ್ಯ ನಡೆದಿಲ್ಲ ಎಂದು ಮನವಿಯನ್ನು ಡಿಸಿಗೆ ನೀಡಿದ್ದರು. ಇದರಿಂದ ಎಚ್ಚೆತ್ತ ಸರ್ವೆ ಇಲಾಖೆ ನೊಂದವರಿಗೆ ನ್ಯಾಯ ಒದಗಿಸಿದ ಘಟನೆ ನಡೆದಿದೆ.
ಮುತವಾಡ ಗ್ರಾಮದ ಸಿದ್ದಲಿಂಗಯ್ಯ ಸಿದ್ದಯ್ಯನವರ 21-10-2019 ರಂದು ಹೊಲದ ಪೊಡಿ(ಸರ್ವೆ) ಮಾಡಿಸಲಿಕ್ಕೆ ಅರ್ಜಿ ಸಲ್ಲಿಸಿದ್ದರು. ಇದು ಬೇಗ ಇತ್ಯರ್ಥವಾಗದ ಕಾರಣ 21-2-2021 ರಂದು ಬೆಳಗಾವಿ ಸುವರ್ಣ ಸೌಧ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಕಳೆದ 18 ರಂದು ಜಿಲ್ಲಾಧಿಕಾರಿ ನೀತಿಶ ಪಾಟೀಲ ಬೈಲಹೊಂಗಲಕ್ಕೆ ಬಂದ ಸಂದರ್ಭದಲ್ಲಿ ಸಮಸ್ಯೆ ತಿಳಿಸಿದಾಗ ನೇರವಾಗಿ ದೂರವಾಣಿ ಮೂಲಕ ಸಂಬಂಧಿಸಿದವರಿಗೆ ಕೆಲಸ ಮಾಡಿ ಕೊಡಲು ತಿಳಿಸಿದ್ದರು. ಇದರ ಬಗ್ಗೆ 19 ರಂದು “ಉದಯವಾಣಿ ಪತ್ರಿಕೆ”ಯಲ್ಲಿ ಬೈಲಹೊಂಗಲದಲ್ಲಿ ಜನರ ಸಮಸ್ಯೆ ಆಲಿಸಿದ ಡಿಸಿ ಎಂಬ ಅಡಿಬರಹದಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.
ಸರ್ವೆ ಇಲಾಖೆ ಇದರಿಂದ ಎಚ್ಚೆತ್ತುಕೊಂಡು ಅರ್ಜಿದಾರನಿಗೆ ಹೊಲದಲ್ಲಿ ಸರ್ವೆ ನಡೆಸುವ ಬಗ್ಗೆ ಪತ್ರ ಕಳೆಸಿದ್ದಾರೆ. ಇದರಿಂದ ಡಿಸಿಯವರ ಸ್ಪಂದನೆಗೆ ಜನರಿಂದ ಮೆಚ್ಚಗೆ ವ್ಯಕ್ತವಾಗಿದೆ.