Advertisement

ಘನತ್ಯಾಜ್ಯ ವಿಲೇವಾರಿ ಪಾಲನೆಯಾಗದ ಡಿಸಿ ಆದೇಶ

04:50 AM May 29, 2018 | Team Udayavani |

ಅಸಮರ್ಪಕ ಘನತ್ಯಾಜ್ಯ ವಿಲೇವಾರಿಯಿಂದ ಒಂದೊಮ್ಮೆ ಬನ್ನೂರು ಡಂಪಿಂಗ್‌ ಯಾರ್ಡ್‌ ಹೊತ್ತಿ ಉರಿದಿತ್ತು. ಇಲ್ಲಿನ ಬೆಂಕಿ ಶಮನಕ್ಕೆ ಹಲವು ದಿನಗಳ ಕಾಲ ಪ್ರಯಾಸ ಪಡಬೇಕಾಯಿತು. ಆ ಬಳಿಕವಾದರೂ ಇಂತಹ ದುರಂತ ಮತ್ತೂಮ್ಮೆ ಎದುರಾಗದಂತೆ ಎಚ್ಚರ ವಹಿಸಬೇಕಾಗಿತ್ತು. ಆ ಸಂದರ್ಭ ಜಿಲ್ಲಾಧಿಕಾರಿ ಸ್ಥಳವನ್ನು ಪರಿಶೀಲಿಸಿ, ನಗರಸಭೆ ಹಾಗೂ ಉಪವಿಭಾಗಾಧಿಕಾರಿಗೆ ಆದೇಶವನ್ನು ಹೊರಡಿಸಿದ್ದರು. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಇದಾವುದೂ ಜಾರಿಗೆ ಬಂದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ.

Advertisement

ನಗರ: ಈ ಹಿಂದೆಯೂ ಸಾಕಷ್ಟು ಬಾರಿ ಘನತ್ಯಾಜ್ಯ ಸಮಸ್ಯೆಯಾಗಿ ಕಾಡಿತ್ತು. ಆ ಎಲ್ಲ ಸಂದರ್ಭ ನಗರಸಭೆ ಮಾತ್ರವಲ್ಲ, ಮೇಲಧಿಕಾರಿಗಳ ಗಮನವನ್ನು ಸೆಳೆಯುವ ಕೆಲಸ ನಡೆದಿತ್ತು. ಆಗ ನೀಡಿದ ಆದೇಶ, ಈಗಲೂ ಜಾರಿಯಾಗಿಲ್ಲ ಎನ್ನುವುದು ವಿಪರ್ಯಾಸ. ಜಿಲ್ಲಾಧಿಕಾರಿ ನೀಡಿದ ಎಲ್ಲ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಒಂದು ವೇಳೆ ಉಲ್ಲಂಘಿಸಿದಲ್ಲಿ ಅಧಿಕಾರಿಗಳ ವಿರುದ್ಧ ಹಾಗೂ ಪೌರಾಯುಕ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಆದೇಶದ ಎಲ್ಲ ಅಂಶಗಳ ಬಗ್ಗೆ ನಿಗಾ ವಹಿಸಲು ಪುತ್ತೂರು ಉಪವಿಭಾಗ ಅಧಿಕಾರಿ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣ ಸಮಿತಿಯನ್ನು ರಚಿಸಲಾಗಿದೆ. ಅದರಂತೆ ಉಪವಿಭಾಗಾಧಿಕಾರಿ ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ತಹಶೀಲ್ದಾರ್‌, ತಾಲೂಕು ಆರೋಗ್ಯಾಧಿಕಾರಿ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ, ಪೊಲೀಸ್‌ ಉಪನಿರೀಕ್ಷಕ, ನಗರಸಭೆ ಆರೋಗ್ಯ ನಿರೀಕ್ಷಕ ಮತ್ತು ಸದಸ್ಯ ಕಾರ್ಯದರ್ಶಿ ನಗರಸಭೆ ಪೌರಾಯುಕ್ತರನ್ನು ನೇಮಿಸಿ ಆದೇಶ ಹೊರಡಿಸಿದ್ದರು. ಇವರು ಕನಿಷ್ಠ ತಿಂಗಳಿಗೆ ಒಂದು ಬಾರಿ ಸಭೆ ಸೇರಿ ಎಲ್ಲ ನಿರ್ದೇಶನಗಳನ್ನು ಪಾಲಿಸುವುದನ್ನು ದೃಢಪಡಿಸಿಕೊಳ್ಳಬೇಕು. ಉಲ್ಲಂಘನೆಯಾಗಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿ 2017 ಮಾರ್ಚ್‌ 20ರಂದು ನೀಡಿದ ಆದೇಶದಲ್ಲಿ ಸೂಚಿಸಿದ್ದರು.

ಪ್ರತ್ಯೇಕಿಸಿ ಸಂಗ್ರಹಿಸಲು ಸಿದ್ಧತೆ
ಹಸಿ, ಒಣ ಕಸ ಪ್ರತ್ಯೇಕ ಸಂಗ್ರಹಿಸಬೇಕು. ತ್ಯಾಜ್ಯ ಸಂಗ್ರಹ ವೇಳೆಯಲ್ಲೇ ಜೈವಿಕ, ಸ್ಯಾನಿಟರಿ ವೇಸ್ಟ್‌, ಗೃಹೋಪಯೋಗಿ ಹಾನಿಕಾರಕ ತ್ಯಾಜ್ಯ ವಸ್ತುಗಳೆಂದು ಬೇರ್ಪಡಿಸಿಯೇ ತೆಗೆದುಕೊಳ್ಳಬೇಕು. ಇದಕ್ಕಾಗಿ ಸೂಕ್ತ ಯೋಜನೆ ರೂಪಿಸಿಕೊಂಡು, ಹಸಿ ಕಸ ಸಂಗ್ರಹಣ ದಿನ, ಒಣ ಕಸ ಸಂಗ್ರಹಣ ದಿನ ಎಂದು ಪ್ರಕಟಿಸಬೇಕು. ಈ ಬಗ್ಗೆ ನಾಗರಿಕರಿಗೆ ತಿಳಿವಳಿಕೆ ನೀಡಬೇಕು. ಸಹಕರಿಸದ ನಾಗರಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು. ಇದಕ್ಕೆ ಬೈಲಾದಲ್ಲೇ ಸೂಕ್ತ ಮಾನದಂಡ ಅಳವಡಿಸಿಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಹಸಿ ಹಾಗೂ ಒಣ ಕಸವೆಂದು ಪ್ರತ್ಯೇಕಿಸಿ ತೆಗೆದುಕೊಳ್ಳಲು ನಗರಸಭೆ ಯೋಜನೆ ಸಿದ್ಧಪಡಿಸಿದೆ. ಇದರನ್ವಯ ಸಾಕಷ್ಟು ಬಿನ್‌ಗಳನ್ನು ತರಿಸಿಕೊಂಡು, ಗೋದಾಮಿನಲ್ಲಿ ಇಟ್ಟಿದೆ. ನೀತಿ ಸಂಹಿತೆ ಮುಗಿಯುವವರೆಗೆ (ಜೂ. 15) ನಾಗರಿಕರಿಗೆ ವಿತರಣೆ ಮಾಡುವಂತಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಅಲ್ಲಿವರೆಗೆ ಘನತ್ಯಾಜ್ಯ ಸಂಗ್ರಹ ವ್ಯವಸ್ಥೆ ಸಮರ್ಪಕವಾಗಿ ನಡೆಯುವುದಿಲ್ಲ ಎಂದೇ ಅರ್ಥ.

ತೆರೆದ ವಾಹನದಲ್ಲೇ ಸಾಗಾಟ
ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಪ್ರತ್ಯೇಕ ವಾಹನ, ಮಾನವ ಸಂಪನ್ಮೂಲ ಬಳಕೆ ಮಾಡಬೇಕು. ತ್ಯಾಜ್ಯ ಕೊಂಡೊಯ್ಯುವ ವೇಳೆ ಮುಚ್ಚಿದ ವಾಹನದಲ್ಲಿ ಪ್ರತ್ಯೇಕವಾಗಿಯೇ ಸಾಗಿಸಬೇಕು. ರಸ್ತೆಗಳಲ್ಲಿ ಚೆಲ್ಲದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಇದು ಸಂಭವಿಸಿದರೆ ಆರೋಗ್ಯ ನಿರೀಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶಕ್ಕೆ ಸಂಬಂಧಿಸಿ, ಗುತ್ತಿಗೆಗೆ 7 ವಾಹನಗಳನ್ನು ಗೊತ್ತು ಪಡಿಸಲಾಗಿದೆ. ಆದರೆ ಮಾನವ ಸಂಪನ್ಮೂಲದ ಕೊರತೆ ಇರುವುದರಿಂದ ತ್ಯಾಜ್ಯ ವಿಲೇವಾರಿ ಸರಿಯಾಗುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸುತ್ತಾರೆ. ತೆರೆದ ವಾಹನದಲ್ಲೇ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ವಾಹನಕ್ಕಿಂತ ಹೆಚ್ಚು ಎತ್ತರದವರೆಗೆ ತ್ಯಾಜ್ಯ ರಾಶಿ ಹಾಕಿ ಸಾಗಿಸುವುದು ಗಮನಕ್ಕೆ ಬಂದಿದೆ. ಕಸ ವಾಹನದ ಹತ್ತಿರ ಹೋಗಲು ಕಷ್ಟವಾಗುವಷ್ಟು ವಾಸನೆ ಇರುತ್ತದೆ. ರಸ್ತೆಗಳಲ್ಲೇ ಕಸ ಚೆಲ್ಲಿಕೊಂಡು ಈ ವಾಹನಗಳು ಸಾಗುತ್ತವೆ.

ಮಾಂಸ ತ್ಯಾಜ್ಯ ಹೂಳುತ್ತಾರೆ
ಪ್ರತ್ಯೇಕಿಸಿದ ಜೈವಿಕ- ಕೊಳೆಯುವ ತ್ಯಾಜ್ಯ ವಸ್ತುವನ್ನು ಎರೆಹುಳು ಗೊಬ್ಬರ/ ಕಾಂಪೋಸ್ಟಿಂಗ್‌/ ಬಯೋ ಮೆಥಿನೇಷನ್‌ ಮೂಲಕ ವಿಲೇವಾರಿ ಮಾಡುವಂತೆಯೂ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದರು. ಬನ್ನೂರಿನ ಡಂಪಿಂಗ್‌ ಯಾರ್ಡ್‌ನಲ್ಲಿ ಇಂತಹ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎನ್ನುವುದೇ ವಿಪರ್ಯಾಸ.

Advertisement

ಮಾಂಸ, ಕೋಳಿ, ಮೀನು ಮಾರುಕಟ್ಟೆಗಳಿಂದ, ಮನೆಗಳಿಂದ ಪ್ರತಿದಿನ ಈ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಅವುಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಅಂಗೀಕೃತ ರಾಸಾಯನಿಕ ಸಿಂಪಡಿಸಿ ವಿಲೇವಾರಿ ಮಾಡಬೇಕು ಎಂಬು ಸೂಚಿಸಿದ್ದರೂ ಡಂಪಿಂಗ್‌ ಯಾರ್ಡ್‌ನ ಹಿಂಬದಿಯಲ್ಲಿ ಒಂದು ಹೊಂಡ ತೆಗೆದು, ಸುರಿಯಲಾಗುತ್ತದೆ. ಈ ಪ್ರದೇಶಕ್ಕೆ ಹೋಗುವುದು ನರಕ ಯಾತನೆ.

ಕ್ರಮಕ್ಕೆ ಸೂಚನೆ
ನಗರಸಭೆ ಅಧಿಕಾರಿಗಳ ಜತೆ ಕಸ ವಿಲೇವಾರಿ ಕುರಿತಾಗಿ ಸಭೆ ನಡೆಸಿದ್ದೇನೆ. ಸರಿಯಾಗಿ ತ್ಯಾಜ್ಯ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಈ ಹಿಂದೆ ತುರ್ತು ಸಂದರ್ಭ ಎದುರಾದಾಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಮುಂದೆ ಇಂತಹ ತುರ್ತು ಸಂದರ್ಭ ಬಾರದಂತೆ ಎಚ್ಚರಿಕೆ ವಹಿಸಲಾಗುವುದು.
– ಎಚ್‌.ಕೆ. ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ, ಪುತ್ತೂರು

— ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next