ಚಿಕ್ಕನಾಯಕನಹಳ್ಳಿ: ರಾಗಿ ಕಟಾವು ಯಂತ್ರಕ್ಕೆ ಜಿಲ್ಲಾಧಿಕಾರಿಗಳು ತುಮಕೂರು ಜಿಲ್ಲೆಯಲ್ಲಿ ಪ್ರತಿ ಗಂಟೆಗೆ ನಿಗದಿತ ಬೆಲೆಯನ್ನು ನಿಗದಿಪಡಿಸಿದ್ದಾರೆ, ಆದರೆ, ಜಿಲ್ಲಾಧಿಕಾರಿಗಳ ಆದೇಶ ತಾಲೂಕಿನಲ್ಲಿಪಾಲನೆಯಾಗುತ್ತಿಲ್ಲ. ಕಟಾವು ಯಂತ್ರದ ಏಜೆಂಟರ್ ಗಳು ಬೇಡಿಕೆಗೆ ಅನುಗುಣವಾಗಿ ರೈತರಿಂದ ಹಣ ಪಡೆಯುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ರೈತರಲ್ಲಿ ಕಾಡುತ್ತಿದೆ.
ಅಕಾಲಿಕ ಮಳೆಯಿಂದ ರಾಗಿ ಬೆಳೆ ಬಹುತೇಕ ನೆಲಕಚ್ಚಿದ್ದು, ಅರ್ಧದಷ್ಟು ರಾಗಿಯೂ ಸಹ ರೈತರ ಕೈ ಸೇರದಾಗಿದೆ. ಅಳಿದು ಉಳಿದ ರಾಗಿಯನ್ನು ಕಟಾವುಮಾಡಲು ಕೂಲಿ ಆಳುಗಳ ಸಮಸ್ಯೆ ಒಂದೆಡೆಯಾದರೆ,ಯಂತ್ರಗಳಲ್ಲಿ ಕಟಾವು ಮಾಡಿಸಲು ದುಬಾರಿ ದರದಸಮಸ್ಯೆ ಇನ್ನೊಂದೆಡೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ರೈತರ ಹಿತದೃಷ್ಟಿಯಿಂದ ಪ್ರತಿ ಗಂಟೆಗೆ 2700 ಹಣ ಮೀರದಂತೆ ಬಾಡಿಗೆಯನ್ನು ನಿಗದಿ ಮಾಡಿ ಆದೇಶ ನೀಡಿದ್ದಾರೆ. ಆದರೆ, ತಾಲೂಕಿನಲ್ಲಿ ಈ ಆದೇಶ ಇನ್ನೂ ಅನುಷ್ಠಾನವಾಗಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ರಾಗಿ ಕಟಾವು ಅನಿವಾರ್ಯ: ತಾಲೂಕಿನಲ್ಲಿ ಬಹುತೇಕ ರಾಗಿ ಕಟಾವು ಯಂತ್ರಗಳು ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಬೇಡಿಕೆ ಇಡುತ್ತಿದ್ದಾರೆ. ಮಳೆಯಿಂದ ಮತ್ತೆ ಎಲ್ಲಿ ರಾಗಿ ಹಾಳಾಗುತ್ತದೆ ಎಂಬ ಭಯದಿಂದ ರೈತರು ಅನಿವಾರ್ಯವಾಗಿ ಹೆಚ್ಚು ಹಣ ನೀಡಿ, ರಾಗಿಯನ್ನು ಕಟಾವು ಮಾಡಿಸುತ್ತಿದ್ದಾರೆ. ತಾಲೂಕು ಆಡಳಿತ ತಾಲೂಕಿಗೆ ಬಂದಿರುವ ಯಂತ್ರಗಳ ಮಾಲೀಕರು ಅಥವಾ ಏಜೆಂಟರ್ ಗಳನ್ನು ಕರೆಸಿ ಸಭೆ ಮಾಡಿ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡುವಂತೆ ಸೂಚನೆ ನೀಡಬೇಕಿದೆ. ಇಲ್ಲವಾದರೇ ಜಿಲ್ಲಾಧಿಕಾರಿಗಳು ರೈತರ ಹಿತಕ್ಕಾಗಿ ಮಾಡಿರುವ ಆದೇಶಕ್ಕೆ ಬೆಲೆ ಇಲ್ಲದಂತಾಗುತ್ತದೆ.
ಹೆಚ್ಚು ಹಣ ಪಡೆಯುತ್ತಿರುವ ಯಂತ್ರಗಳ ಮಾಹಿತಿ ನೀಡಿದರೆ,ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಗೆ ಇದರ ಬಗ್ಗೆಪರಿಶೀಲನೆ ನಡೆಸುವಂತೆ ತಿಳಿಸಲಾಗುತ್ತದೆ. ಜಿಲ್ಲಾಧಿ ಕಾರಿಗಳು ನಿಗದಿ ಪಡಿಸಿದದರದ ಹಣವನ್ನು ಮಾತ್ರ ಪಡೆಯಬೇಕು
. – ತೇಜಸ್ವಿನಿ, ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ
ರಾಗಿ ಕಟಾವು ಯಂತ್ರದ ಮಾಲೀಕರು ಹಾಗೂ ಏಜೆಂಟರ್‌ಗಳು ತಮ್ಮ ಮನಸ್ಸಿಗೆ ಬಂದಂತೆ ದರ ನಿಗದಿಪಡಿಸುತ್ತಿದ್ದಾರೆ. 3500ದಿಂದ 3900ವರಗೆ ಹಣ ಪಡೆಯುತ್ತಿದ್ದಾರೆ. ಡೀಸಿ ಆದೇಶ ನಮಗೆ ಗೊತ್ತೇ ಇಲ್ಲ ಎಂದು ತಿಳಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಬೇಕು.
-ಸುರೇಶ್, ರೈತ
– ಚೇತನ್