Advertisement

ಅಲ್ಪಾವಧಿ ಬೆಳೆ ಬೆಳೆಯಲು ಡಿಸಿ ಸೂಚನೆ

11:37 AM Jul 11, 2017 | |

ಮೈಸೂರು: ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟಿರುವುದರಿಂದ ಪರ್ಯಾಯವಾಗಿ ರೈತರಿಗೆ ಅಲ್ಪಾವಧಿ ಬೆಳೆಗಳನ್ನು ಪರಿಚಯಿಸಲು ಜಿಲ್ಲಾಡಳಿತ ಮುಂದಾಗಿದೆ. ಜುಲೈ 2ನೇ ಪಾಕ್ಷಿಕದಲ್ಲಿ ಮುಂಗಾರು ಮಳೆ ಚುರುಕಾದರೆ ಜಿಲ್ಲೆಯಲ್ಲಿ ಎಂದಿನಂತೆ ಬೆಳೆ ಬೆಳೆಯಬಹುದಾಗಿದೆ. ಇಲ್ಲವಾದಲ್ಲಿ, ಆಗಸ್ಟ್‌ ತಿಂಗಳಲ್ಲಿ ಸಾಮಾನ್ಯ ಮಳೆಯಾದರೆ, ಭತ್ತ ಮತ್ತು ರಾಗಿ ಬೆಳೆಗಳಲ್ಲಿ ರೈತರು ಅಲ್ಪಾವಧಿ ತಳಿಗಳನ್ನು ಬೆಳೆಯಬೇಕಾಗುತ್ತದೆ.

Advertisement

ಕೃಷಿ ಇಲಾಖೆವತಿಯಿಂದ ಅಲ್ಪಾವಧಿ ತಳಿಯ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್‌ ಡಿ. ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಳೆಯ ಕೊರತೆ: ಜು. 8ರವರೆಗಿನ ವರದಿ ಪ್ರಕಾರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 317.4 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ, ಈವರೆಗೆ 362.1 ಮಿ.ಮೀ ಮಳೆ ಆಗಿದೆ. ಜೂನ್‌ ತಿಂಗಳಲ್ಲಿ 89.1 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ ಕೇವಲ 48.9 ಮಿ.ಮೀ ಮಳೆ ಆಗಿದೆ. ಇದರಿಂದ ಜೂನ್‌ ತಿಂಗಳಲ್ಲಿ ಶೇ.45ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ನಂಜನಗೂಡಿನಲ್ಲಿ ವಾಡಿಕೆಗಿಂತ ಶೇ.39ರಷ್ಟು ಹೆಚ್ಚು ಮಳೆ ಆಗಿದ್ದರೆ, ಎಚ್‌.ಡಿ.ಕೋಟೆಯಲ್ಲಿ ವಾಡಿಕೆಗಿಂತ ಶೇ.11ರಷ್ಟು ಮಳೆ ಕೊರತೆಯಾಗಿದೆ ಎಂದರು.

ಬಿತ್ತನೆಯ ಗುರಿ: ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯ ಮಳೆ ಆಶ್ರಿತ ಪ್ರದೇಶದಲ್ಲಿ 2.86 ಲಕ್ಷ ಹೆಕ್ಟೇರ್‌ ಹಾಗೂ ನೀರಾವರಿಯಲ್ಲಿ 1.14 ಲಕ್ಷ ಹೆಕ್ಟೇರ್‌ ಸೇರಿದಂತೆ ಒಟ್ಟಾರೆ 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈವರೆಗೆ ಮಳೆ ಆಶ್ರಿತ ಪ್ರದೇಶದಲ್ಲಿ 2.25 ಲಕ್ಷ ಹೆಕ್ಟೇರ್‌ ಹಾಗೂ ನೀರಾವರಿಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇ.78ರಷ್ಟು ಬಿತ್ತನೆಯಾಗಿದ್ದರೆ, ತಿ.ನರಸೀಪುರ ತಾಲೂಕಲ್ಲಿ ಕೇವಲ ಶೇ.15ರಷ್ಟು ಮಾತ್ರ ಬಿತ್ತನೆ ಆಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಕೇವಲ 57962 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು ಎಂದು ವಿವರಿಸಿದರು.

ಕೀಟ ಬಾಧೆ: ಮಳೆ ಆಶ್ರಿತ ಪ್ರದೇಶದಲ್ಲಿ ಪ್ರಮುಖವಾಗಿ ಹತ್ತಿ, ತಂಬಾಕು, ದ್ವಿದಳ ಧಾನ್ಯ, ಜೋಳ ಮತ್ತು ಮುಸುಕಿನ ಜೋಳ ಬೆಳೆಯಲಾಗಿದ್ದು, ದ್ವಿದಳ ಧಾನ್ಯ ಬೆಳೆಗಳು ಕಟಾವು ಹಂತದಲ್ಲಿವೆ. ಹತ್ತಿ ಬೆಳೆಯಲ್ಲಿ ಅಲ್ಲಲ್ಲಿ ರಸ ಹೀರುವ ಕೀಟಗಳ ಬಾಧೆ ಕಂಡುಬಂದಿದ್ದು, ಅವುಗಳ ಹತೋಟಿಗಾಗಿ ರೈತಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸಲಹೆ ಹಾಗೂ ಪೀಡೆನಾಶಕಗಳನ್ನು ನೀಡಲಾಗುತ್ತಿದೆ ಎಂದರು.

Advertisement

ಭತ್ತದ ಬೀಜ ದಾಸ್ತನು: ಜಿಲ್ಲೆಗೆ ಒಟ್ಟು 37692 ಕ್ವಿಂಟಾಲ್‌ ಬಿತ್ತನೆ ಬೀಜ ಬೇಡಿಕೆ ಇದ್ದು, ಇಲಾಖೆವತಿಯಿಂದ ಈವರೆಗೆ ಸುಮಾರು 1900 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಿಸಲಾಗಿದೆ. ಸುಮಾರು 1100 ಕ್ವಿಂಟಾಲ್‌ನಷ್ಟು ಭತ್ತದ ಬೀಜವನ್ನು ಆಯ್ದ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಹೇಳಿದರು.
ಜತೆಗೆ ಇದೇ ಮೊದಲ ಬಾರಿಗೆ ರೈತ ಸಂಪರ್ಕ ಕೇಂದ್ರಗಳ ಜತೆಗೆ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 71 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಭತ್ತದ ಬಿತ್ತನೆ ಬೀಜ ವಿತರಣೆಗೆ ಕ್ರಮವಹಿಸಲಾಗಿದೆ.

ಮುಂಗಾರು ಹಂಗಾಮಿಗೆ ಜಿಲ್ಲೆಗೆ 110614 ಮೆಟ್ರಿಕ್‌ ಟನ್‌ ರಸಗೊಬ್ಬರದ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದ್ದು, ಜೂನ್‌ ಅಂತ್ಯದವರೆಗೆ 49665 ಮೆಟ್ರಿಕ್‌ ಟನ್‌ ರಸಗೊಬ್ಬರ ಸರಬರಾಜಾಗಿದ್ದು, ಒಟ್ಟಾರೆ 53035 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಅಗತ್ಯ ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ ಎಂದರು. ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮಸುಂದ್ರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ಹಾಜರಿದ್ದರು.

ಬೆಳೆವಿಮೆ ಮಾಡಿಸಿ
2017ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರûಾ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯನ್ನು ಮುಂದುವರಿಸಲಾಗಿದ್ದು, ಬೆಳೆವಾರು ರೈತರು ಪಾವತಿಸಬೇಕಾದ ವಿಮಾ ಕಂತು ಹಾಗೂ ದಿನಾಂಕ ಅಧಿಸೂಚನೆ ಹೊರಡಿಸಲಾಗಿದೆ. ಉದ್ದು, ಹೆಸರು ಹಾಗೂ ಎಳ್ಳು ಬೆಳೆಗಳ ವಿಮಾ ಕಂತು ಪಾವತಿ ಅವಧಿ ಮುಕ್ತಾಯವಾಗಿದ್ದು, ಮುಸುಕಿನ ಜೋಲ, ಜೋಳ, ತೊಗರಿ, ಸೂರ್ಯಕಾಂತಿ, ಹರಳು, ಶೇಂಗಾ ಮತ್ತು ಹತ್ತಿ ಬೆಳೆಗಳಿಗೆ ರೈತರು ಜು.31ರವರೆಗೆ ವಿಮಾ ಕಂತು ಪಾವತಿಸಬಹುದಾಗಿದೆ.

ಅವರೆ, ಅಲಸಂದೆ ಹಾಗೂ ಕೆಲವು ತರಕಾರಿ ಬೆಳೆಗಳಿಗೆ ಜು. 15ರ ವರೆಗೆ ವಿಮಾ ಕಂತು ಪಾವತಿಸಬಹುದಾಗಿದೆ. ಭತ್ತ ಬೆಳೆಯುವ ರೈತರು ಆ.14ರ ವರೆಗೆ ವಿಮಾ ಕಂತು ಪಾವತಿಸಬಹುದಾಗಿದ್ದು, ರೈತರು ಈ ವಿಮೆ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next