ದೇವನಹಳ್ಳಿ: ಇತರೆ ಜಿಲ್ಲೆಗಳಲ್ಲಿ ಗ್ರಾಪಂ ಸದಸ್ಯ ಸ್ಥಾನಗಳ ಆಯ್ಕೆ ಪ್ರಕ್ರಿಯೆ ಹರಾಜು ಮೂಲಕ ನಡೆಯುತ್ತಿರುವ ಬಗ್ಗೆ ವರದಿಯಾಗಿದ್ದು, ಇಂತಹ ಪ್ರಕ್ರಿಯೆಗಳು ನಡೆಯದಂತೆ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಎನ್.ರವೀಂದ್ರ ಸೂಚಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿ ನಡೆದ ಗ್ರಾಪಂ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ವಿವಿಧ ತಂಡಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಾಂತರ ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ಹಿರಿಯ ಅಧಿಕಾರಿ ಚಂದ್ರಕಾಂತ್ ನೇಮಕವಾಗಿದ್ದಾರೆ. ಚುನಾವಣಾಸಂಬಂಧಯಾವುದೇ ಸಮಸ್ಯೆಗಳು, ದೂರುಗಳಿದ್ದರೆ ಅವರ ಗಮನಕ್ಕೆ ತರಬೇಕು ಎಂದು ಹೇಳಿದರು.
ಭದ್ರತೆ ಕಲ್ಪಿಸಲು ಸೂಚನೆ: ಅಬಕಾರಿ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯ ಅಗತ್ಯ ವಿದ್ದು, ಸಹಕಾರದಿಂದ ಕೆಲಸ ನಿರ್ವಹಿಸಬೇಕು. ಚುನಾವಣಾ ಸಂಬಂಧ ದೂರುಗಳನ್ನು ಪರಿಶೀಲಿಸಿ ಶೀಘ್ರವೇ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಪಂ ಹಂತದಲ್ಲಿ ನೇಮಕವಾಗಿರುವ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆನೀಡಿದರು.
ಕೋವಿಡ್ ನಿಯಮ ಪಾಲಿಸಿ: ಮತದಾರರಿಗೆ ಚುನಾವಣೆ ದಿನಾಂಕ, ಸಮಯವನ್ನು ತಿಳಿಸುವ ಕಾರ್ಯದೊಂದಿಗೆ ಮತದಾನದ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿ ಕೋವಿಡ್-19 ಕುರಿತಾದ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆಗಳ ಅಧಿಕಾರಿಗಳು ಮಾಡಬೇಕೆಂದು ತಾಪಂ ಇಒಗೆ ಸೂಚನೆ ನೀಡಿದರು.
ರಾತ್ರಿ ಗಸ್ತು ಹೆಚ್ಚಿಸಿ: ಜಿಪಂ ಸಿಇಒ ಎಂ.ಆರ್. ರವಿಕುಮಾರ್ ಮಾತನಾಡಿ, ನೆಲಮಂಗಲ ಮತ್ತು ಹೊಸಕೋಟೆ ಸೂಕ್ಷ್ಮ ಕ್ಷೇತ್ರಗಳಾಗಿದ್ದು, ಎಚ್ಚರ ವಹಿಸುವುದು ಅಗತ್ಯ ಎಂದರಲ್ಲದೆ, ಸ್ಥಳೀಯವಾಗಿ ಹಣ, ಮದ್ಯ, ಉಡುಗೊರೆ ಹಾಗೂ ಸಾಮಗ್ರಿ ಯನ್ನು ನೀಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ಪೊಲೀಸ್ ಇಲಾಖೆಯವರು ರಾತ್ರಿ ಗಸ್ತು ಹೆಚ್ಚಿಸಬೇಕು ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಕೆಲವು ಸಮುದಾಯಅಭ್ಯರ್ಥಿಗಳಿಗೆ ಬೆದರಿಕೆಗಳು ಬರುವ ಸಾಧ್ಯತೆ ಇರುವುದರಿಂದ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಮೂಲ ಸೌಕರ್ಯ ಕಲ್ಪಿಸಿ: ಗ್ರಾಮೀಣ ಪ್ರದೇಶದಲ್ಲಿ ಪಾಳು ಬಿದ್ದ ಮನೆ, ಗೊಬ್ಬರದ ಗುಂಡಿಗಳಲ್ಲಿ ಅಕ್ರಮ ವಾಗಿ ಮದ್ಯ ಸಂಗ್ರಹಿಸುವ ಸಾಧ್ಯತೆ ಇರುವುದರಿಂದ ಅಬಕಾರಿ ಮತ್ತು ಪೊಲೀಸ್ ಇಲಾಖೆಗಳು ಗಸ್ತು ಹೆಚ್ಚಿಸಿ, ಅನುಮಾನ ಬಂದಲ್ಲಿಸೂಕ್ತ ರೀತಿಯಲ್ಲಿ ಪರಿಶೀಲಿಸಬೇಕು. ಮತದಾನ ಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯಸೇರಿ ಮೂಲ ಸೌಕರ್ಯ ಕಲ್ಪಿಸಲು ತಾಪಂ ಇಒಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್. ಕೆ.ನಾಯಕ್ ಮಾತನಾಡಿ, ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಕೋವಿಡ್-19 ಕುರಿತು ಆರೋಗ್ಯ ಇಲಾಖೆಯ ಸಿಬ್ಬಂದಿ ನೇಮಿಸುವುದರ ಜೊತೆಗೆ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಜಿಲ್ಲಾ ಅಬಕಾರಿ ಉಪ ಆಯುಕ್ತ ರವೀಂದ್ರ, ಜಿಲ್ಲಾ ಉಪ ಆರಕ್ಷಕ ಅಧೀಕ್ಷಕರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.