ರಾಯಚೂರು: ನಗರದ ಮಾವಿನ ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿ ಕೈಗೊಂಡಿದ್ದು, ಮೊದಲ ಹಂತದಲ್ಲಿ ಕೆರೆ ನೀರು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಸೂಚಿಸಿದರು. ಕೆರೆ ಅಭಿವೃದ್ಧಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಈ ಬೇಸಿಗೆಯಲ್ಲಿ ತ್ವರಿತವಾಗಿ ಕೆರೆಯ ನೀರು ಖಾಲಿ ಮಾಡಿದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಕೈಗೊಂಡ ಕಾಮಗಾರಿ ಮುಗಿಸಲು ಸಾಧ್ಯ. ಆದ ಕಾರಣ ಮೊದಲು ಕೆರೆಯಲ್ಲಿ ಉಳಿದಿರುವ ನೀರಿನ ಆಳವನ್ನು ಪರಿಶೀಲಿಸಿ, ಅದನ್ನು ಸಂಪೂರ್ಣ ಹೊರಹಾಕಬೇಕು.
ಮಾರ್ಚ್ ಅಂತ್ಯಕ್ಕೆ ನೀರು ಸಂಪೂರ್ಣವಾಗಿ ಖಾಲಿಯಾದಲ್ಲಿ ವಿಶಾಲವಾದ ಕೆರೆಯ ಹೂಳನ್ನು ತೆಗೆಯಲು ಸಾಧ್ಯ. ಹೂಳು ತೆಗೆಯಲು ವ್ಯವಸ್ಥಿತವಾಗಿ ಕಾಮಗಾರಿ ಹಮ್ಮಿಕೊಳ್ಳಬೇಕು. ಅದಕ್ಕೆ ನುರಿತ ಇಂಜಿನಿಯರ್ ನೆರವು ಪಡೆಯಬೇಕು ಎಂದು ನಗರಸಭೆ ಪೌರಾಯುಕ್ತ ವೆಂಕಟೇಶ ಅವರಿಗೆ ಸೂಚಿಸಿದರು.
ಪೌರಾಯುಕ್ತ ವೆಂಕಟೇಶ ಮಾತನಾಡಿ, ಈವರೆಗೂ ಪಂಪ್ ಇಲ್ಲದೆ ನೀರು ತೆರವುಗೊಳಿಸಲಾಗಿತ್ತು. ಆದರೆ, ಇದೀಗ ಮೋಟರ್ ಅಳವಡಿಸಿ ನೀರು ಖಾಲಿ ಮಾಡಲಾಗುವುದು. ಒಂದು ವಾರದೊಳಗೆ ನೀರು ಸಂಪೂರ್ಣ ಖಾಲಿ ಮಾಡುವುದಾಗಿ ತಿಳಿಸಿದರು.
ದೊಡ್ಡ-ದೊಡ್ಡ ಮೋಟರ್‌ಗಳನ್ನು ಅಳವಡಿಸಿ ನೀರು ತೆರವು ಮಾಡಿ, ಒಣ ಭಾಗವೊಂದನ್ನು ಆಯ್ಕೆ ಮಾಡಿಕೊಂಡು ಹೂಳು ತೆಗೆಯುವ ಕಾಮಗಾರಿ ಆರಂಭಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಅತಿಕ್ರಮಣಕಾರರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸುವಂತೆ ಸೂಚಿಸಿದರು. ಮಾವಿನ ಕೆರೆಗೆ ಈ ಹಿಂದೆ ವಿವಿಧೆಡೆಯಿಂದ ಒಳಚರಂಡಿ ನೀರು ಹರಿದು ಬರುತ್ತಿತ್ತು, ಅದನ್ನು ತಡೆ ಹಿಡಿಯಲಾಗಿದೆ. ಮತ್ತೂಮ್ಮೆ ಅದನ್ನು ನಗರಸಭೆ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣಪ್ಪ, ನಗರಸಭೆ ಅಧಿಕಾರಿಗಳು ಹಾಜರಿದ್ದರು.