Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ನಗರದ ಅಭಿವೃದ್ಧಿ, ಸ್ವತ್ಛತೆ, ಕುಡಿಯುವ ನೀರು ಕುರಿತು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಆವರು ಮಾತನಾಡಿದರು.
Related Articles
Advertisement
ನಗರದಲ್ಲಿ ಚರಂಡಿ ಸ್ವತ್ಛತೆ, ಕುಡಿಯುವ ನೀರಿನ ತೊಂದರೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಲು ಕರೆ ಮಾಡಿದಾಗ ಕರೆ ಸ್ವೀಕರಿಸಿ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು. ಪತ್ರಿಕೆಯಲ್ಲಿ ಬರುವ ಕುಂದು ಕೊರತೆಗಳನ್ನು ಗಮನಿಸಿ ಅದರ ನಿವಾರಣೆಗೂ ಕಾರ್ಯಪ್ರವೃತ್ತರಾಗಬೇಕು ಎಂದು ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಮ್ಯಾನ್ ಹೋಲ್‌ಗಳಲ್ಲಿ ಕಾರ್ಮಿಕರು ಇಳಿಯುವುದು ಅಥವಾ ಇಳಿಸುವುದು ಅಕ್ಷಮ್ಯ ಅಪರಾಧವಾಗಿದೆ. ಒಂದು ವೇಳೆ ಮ್ಯಾನ್ ಹೋಲ್‌ಗಳಲ್ಲಿ ಸಫಾಯಿ ಕಾರ್ಮಿಕರನ್ನು ಇಳಿಸಿದಲ್ಲಿ ಅಂತಹವರ ವಿರುದ್ಧ ಮ್ಯಾನ್ವಲ್ ಸ್ಕಾವೆಂಜರ್ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ನಗರದಲ್ಲಿ ಮ್ಯಾನ್ ಹೋಲ್ ಸಂಖ್ಯೆ ಕುರಿತು ವಾಟರ್ ಮ್ಯಾನ್ ಗಳಿಂದ ಸರ್ವೇ ಮಾಡಿಸಿ ಮೂರು ದಿನದೊಳಗೆ ವರದಿ ಸಲ್ಲಿಸಿ ಎಂದು ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಡಾಡಿ ದನಗಳಿಗೆ ಕಡಿವಾಣ ಹಾಕಿ: ನಗರದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ರಸ್ತೆ ಸವಾರರಿಗೆ ತೊಂದರೆಯಾಗುತ್ತಿದ್ದು, ಸ್ಥಳೀಯ ಎನ್.ಜಿ.ಒ.ಗಳ ಸಹಕಾರದಿಂದ ಇದಕ್ಕೆ ಕಡಿವಾಣ ಹಾಕಿ ಎಂದರು.
ಜಿಲ್ಲಾ ಆಸ್ಪತ್ರೆಗೆ ನೀರು ಪೂರೈಸಿ: ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಹೀಗಿದ್ದಾಗ ಸಮರ್ಪಕವಾಗಿ ನೀರು ಸರಬರಾಜಾಗದಿದ್ದರೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಆಸ್ಪತ್ರೆಗೆ ಬೇಡಿಕೆಯಂತೆ ಕುಡಿಯುವ ನೀರನ್ನು ಪ್ರಥಮಾದ್ಯತೆ ಮೇರೆಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಿ. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಎಚ್ಚರಿಕೆ ನೀಡಿದರು.
ಜಾಹೀರಾತುಗಳಿಗೆ ಅನುಮತಿ ಕಡ್ಡಾಯ: ಪಾಲಿಕೆ ವ್ಯಾಪ್ತಿಯಲ್ಲಿನ ಫಲಕಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕ ಉದ್ದಿಮೆಗಳು ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ನಿಟ್ಟಿನಿಲ್ಲಿಯೂ ಪಾಲಿಕೆ ಅಧಿಕಾರಿಗಳು ಗಮನಹರಿಸಬೇಕು. ನಗರದ ಸ್ವತ್ಛತೆ ಮತ್ತು ಸೌಂದರ್ಯಕ್ಕೆ ಧಕ್ಕೆಯಾಗುವಂತಹ ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಹಂದಿ ಸಾಕುವವರ ವಿರುದ್ಧ ಕ್ರಿಮಿನಲ್ ಕೇಸ್: ನಗರದ ಕೆಲವೆಡೆ ಹಂದಿಗಳ ಸಾಕಾಣಿಕೆಯಿಂದ ಸಾಂಕ್ರಾಮಿಕ ರೋಗಗಳು ಹರಡಿ ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹಂದಿ ಸಾಕಾಣಿಕೆ ಇರುವ ಪ್ರದೇಶವನ್ನು ಗುರುತಿಸಿ. ದಸರಾ ಹಬ್ಬದ ನಂತರ ಅವುಗಳನ್ನು ಹಿಡಿಯಲು ಕಾರ್ಯಪ್ರವೃತ್ತರಾಗಬೇಕು.ಹಂದಿಗಳನ್ನು ಹಿಡಿಯುವ ಸಂದರ್ಭದಲ್ಲಿ ಹಂದಿ ಮಾಲೀಕರು ಎಂದು ಹೇಳಿಕೊಂಡು ಯಾರಾದರೂ ಮುಂದೆ ಬಂದು ಈ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲಿ ನಿಯಮಾನುಸಾರ ಅಂತಹವರ ವಿರುದ್ಧ ಪಾಲಿಕೆಯಿಂದ ಕ್ರಿಮಿನಲ್ ಮೊಕದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಕಾರ್ಯನಿರ್ವಾಹಕ ಅಭಿಯಂತ ಶಿವಣಗೌಡ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಂ.ಎ.ಆರಿಫ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಾಂತ್ರಿಕ ಸಹಾಯಕ ಆರ್.ವಿ.ಪಾಟೀಲ, ಸಹಾಯಕ ಕಾರ್ಯನಿವಾಹಕ
ಅಭಿಯಂತರರಾದ ನರಸಿಂಹರೆಡ್ಡಿ, ಉಮೇಶ ಪಾಂಚಾಳ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತ ರಂಗಯ್ಯ ಬಡಿಗೇರ, ಪರಿಸರ ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.