Advertisement

ನಕಲು ಮುಕ್ತ ಪಿಯು ಪರೀಕ್ಷೆಗೆ ಡಿಸಿ ಸೂಚನೆ

01:02 PM Apr 14, 2022 | Team Udayavani |

ಕಲಬುರಗಿ: ಜಿಲ್ಲೆಯ 47 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್‌ 22ರಿಂದ ಮೇ 18ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಯಾವುದೇ ಲೋಪಕ್ಕೆ ಅಸ್ಪದ ಕೊಡದೇ ನಕಲು ರಹಿತ ಪರೀಕ್ಷೆ ನಡೆಸಬೇಕೆಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಖಡಕ್‌ ಸೂಚನೆ ನೀಡಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ 25 ಹಾಗೂ ತಾಲೂಕಾ ಪ್ರಾಂತ್ಯದಲ್ಲಿ 22ಸೇರಿ 47 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 29445 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಸನ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್‌ ಹೀಗೆ ಮೂಲಸೌಕರ್ಯ ಕಲ್ಪಿಸುವುದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಜವಾಬ್ದಾರಿಯಾಗಿದ್ದು, ಪರೀಕ್ಷಾ ಆರಂಭಕ್ಕೂ ಮುನ್ನವೇ ಇವುಗಳನ್ನು ಖಾತ್ರಿಪಡಿಸಿಕೊಳ್ಳಬೇಕು. ಅಂಗವಿಕಲರಿಗೆ ನೆಲ ಮಹಡಿಯ ಕೊಠಡಿಯಲ್ಲಿಯೇ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದರು.

ಪ್ರತಿ ಪರೀಕ್ಷಾ ಕೇಂದ್ರಲ್ಲಿ ಸೂಕ್ತ ಫ್ರಿಸ್ಕಿಂಗ್‌ ಮಾಡಬೇಕು. ಸೂಕ್ಷ್ಮ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಒದಗಿಸಲಾಗುವುದು. ಮಕ್ಕಳ ಭವಿಷ್ಯದ ಪ್ರಮುಖ ಘಟ್ಟದ ಪರೀಕ್ಷೆ ಇದಾಗಿದ್ದು, ಯಾವುದೇ ಕಾರಣಕ್ಕೂ ನಕಲಿಗೆ ಅವಕಾಶ ನೀಡಬಾರದು. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಶಿಕ್ಷಕರು ಮಕ್ಕಳೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕು ಎಂದರು.

ಸಿಸಿ ಕ್ಯಾಮೆರಾ ಕಣ್ಗಾವಲು: ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರ ಒಳಗೊಂಡಂತೆ ಪ್ರತಿ ಕೊಠಡಿಯಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದರು.

Advertisement

ಮೊಬೈಲ್‌ ನಿಷೇಧ: ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮೊಬೈಲ್‌, ಇ-ಕ್ಯಾಮೆರಾ, ಲ್ಯಾಪ್‌ಟಾಪ್‌, ಕ್ಯಾಲ್ಕುಲೇಟರ್‌ ಹಾಗು ಇನ್ನಿತರ ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಮೇಲ್ವಿಚಾರಕರು ಮೊಬೈಲ್‌ ಬಳಸುವಂತಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.

ಅಕ್ರಮ ಮಾಹಿತಿ ನೀಡಿ: ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಮಾತನಾಡಿ, ಪರೀಕ್ಷೆ ಸಂದರ್ಭದಲ್ಲಿ ಯಾವುದಾದರೂ ತೊಂದರೆಗಳಿದ್ದಲ್ಲಿ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಬಹುದು. ಪ್ರತಿ ಕೇಂದ್ರಕ್ಕೆ ಬೇಡಿಕೆ ಅನುಸಾರ ಪೊಲೀಸ್‌ ಭದ್ರತೆ ಒದಗಿಸಲಾಗುವುದು. ಹಿಂದಿನ ಪರೀಕ್ಷೆಗಳಲ್ಲಿ ನಕಲಿನಲ್ಲಿ ಭಾಗವಹಿಸಿದವರು ಮತ್ತು ಪ್ರೋತ್ಸಾಹಿಸಿದವರು ಈ ಪರೀಕ್ಷೆಯಲ್ಲಿಯೂ ಅಕ್ರಮ ಚಟುವಟಿಕೆಗಳನ್ನು ನಡೆಸುವ ಗುಮಾನಿಯಿದ್ದಲ್ಲಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿ. ಇಲಾಖೆ ಅವರ ಮೇಲೆ ನಿಗಾ ವಹಿಸುತ್ತದೆ ಎಂದು ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಪರೀಕ್ಷೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ನಗರ ಎಸಿಪಿ ದೀಪನ್‌ ಎಂ.ಎನ್‌., ಅಪರ ಜಿಲ್ಲಾ ಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತೆ ಬಿ.ಸುರೇಖಾ ಹಾಗೂ ತಹಶೀಲ್ದಾರರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next