ಜೇವರ್ಗಿ: ತಾಲೂಕು ಕಚೇರಿಗೆ ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಜನರೊಂದಿಗೆ ವಿನಯತೆಯಿಂದ ವರ್ತಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಿ ಜನರ ತೊಂದರೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಕಾರಿ ಯಶವಂತ ವಿ. ಗುರುಕರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಅಧಿಕಾರಿಗಳ ಸಭೆ ನಡೆಸಿ ಸಲ್ಲಿಕೆಯಾದ ಅರ್ಜಿಗಳನ್ನು ಖುದ್ದು ಪರಿಶೀಲಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಕೆಲಸ, ಕಾರ್ಯಗಳನ್ನು ಸಕಾಲದಲ್ಲಿ ನಿರ್ವಹಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಕೊರತೆ ನೆಪ ಹೇಳದೇ ಕಾರ್ಯನಿರ್ವಹಿಸಬೇಕು. ಶ್ರದ್ಧೆಯಿಂದ ಕೆಲಸ ಮಾಡಿ ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಜಿಲ್ಲಾಧಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೀಜ, ಗೊಬ್ಬರ ಕೊರತೆ ಬಗ್ಗೆ ಕೆಲವರಿಂದ ಸುಳ್ಳು ವದಂತಿ ಹರಡಿಸಲಾಗುತ್ತಿದೆ. ಕೃಷಿ ಇಲಾಖೆ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಹೆಸರು, ಉದ್ದು, ಸೋಯಾಬಿನ್, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. 731ಮೆಟ್ರಿಕ್ ಟನ್ ಡಿಎಪಿ ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳಲ್ಲಿ ದಾಸ್ತಾನು ಮಾಡಲಾಗಿದೆ. ರೈತರಿಗೆ ತೊಂದರೆಯಾದಲ್ಲಿ ಹಾಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಕೂಡಲೇ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರನ್ನು ಭೇಟಿ ಮಾಡಲು ಸೂಚಿಸಿದರು.
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಒಟ್ಟು 29 ಮನೆಗಳು ಬಿದ್ದಿದ್ದು, ಮನೆ ಹಾನಿಗೀಡಾದ ಕುಟುಂಬದ ಸದಸ್ಯರಿಗೆ ತಕ್ಷಣ ರೂ.10 ಸಾವಿರ ರೂ. ಪರಿಹಾರ ಧನ ನೀಡಲಾಗುವುದು. ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನಲ್ಲಿ ಕಳೆದ ವರ್ಷ ಭೀಮಾನದಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ 24,999 ರೈತರಿಗೆ 31.4ಕೋಟಿ ರೂ. ಬೆಳೆಹಾನಿ ಪರಿಹಾರ ನೀಡಲಾಗಿದೆ. 729 ರೈತರಿಗೆ ತಾಂತ್ರಿಕ ಕಾರಣದಿಂದ ಪರಿಹಾರ ಧನ ಬಿಡುಗಡೆಯಾಗಿಲ್ಲ. ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಪರಿಹಾರ ದೊರೆಯದ ರೈತರಿಗೆ ಪರಿಹಾರ ಸಿಗುವಂತೆ ಮಾಡಬೇಕು ಎಂದು ಸೂಚಿಸಿದರು.
ಪಟ್ಟಣದ ಬುಟ್ನಾಳ ರಸ್ತೆಯಲ್ಲಿರುವ ಸಾರ್ವಜನಿಕ ಸ್ಮಶಾನ ಭೂಮಿಗೆ ತೆರಳಲು ರಸ್ತೆ ಸಮಸ್ಯೆ ಉಂಟಾಗಿದ್ದು, ಸ್ಮಶಾನ ಭೂಮಿಗೆ ತೆರಳಲು ಯಾರಾದ್ರೂ ಅಡ್ಡಿಪಡಿಸಿದರೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಹಶೀಲ್ದಾರ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸಮಸ್ಯೆ ಬಗೆಹರಿಸಬೇಕು ಎಂದು ತಹಶೀಲ್ದಾರ್ ದಾಸರಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನರಿಬೋಳ ಭೇಟಿ: ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಜಿಲ್ಲಾ ಧಿಕಾರಿ ಯಶವಂತ ಗುರುಕರ ಅವರನ್ನು ಭೇಟಿ ಮಾಡಿ ತಾಲೂಕಿನ ರೈತರ ಸಮಸ್ಯೆ ಕುರಿತು ಚರ್ಚಿಸಿ ಭೀಮಾನದಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ ರೈತರಿಗೆ ಶೀಘ್ರದಲ್ಲಿ ಪರಿಹಾರ ಹಣ ಬಿಡುಗಡೆಗೆ ಒತ್ತಾಯಿಸಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ್, ಗ್ರೇಡ್-2 ತಹಶೀಲ್ದಾರ್ ಡಾ| ರಮೇಶ ಹಾಲು, ಸಮಾಜ ಕಲ್ಯಾಣ ಇಲಾಖೆಯ ಅಶೋಕ ನಾಯಕ, ಅಬಕಾರಿ ನಿರೀಕ್ಷಕಿ ವನಿತಾ ಸೀತಾಳೆ, ಕೃಷಿ ಇಲಾಖೆಯ ಶರಣಗೌಡ ರಂಗಣಗೌಡ, ಟಿಎಚ್‌ಒ ಡಾ| ಸಿದ್ಧು ಪಾಟೀಲ, ಸಿಪಿಐ ಶಿವಪ್ರದಾಸ ಮಠದ್, ಸಿಡಿಪಿಒ ದೀಪಿಕಾ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಡಿ.ಬಿ.ಪಾಟೀಲ, ಪಶು ಇಲಾಖೆ, ತೋಟಗಾರಿಕೆ, ಅರಣ್ಯ ಇಲಾಖೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.