Advertisement

ಶತಾಯುಷಿ ಮತದಾರರ ಆಹ್ವಾನ ಅಭಿಯಾನಕ್ಕೆ ಡಿಸಿ ಚಾಲನೆ

12:20 AM Apr 11, 2023 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯ 209 ಮಂದಿ ಶತಾಯುಷಿ ಮತದಾರರಿಗೆ ಮೇ 10 ರಂದು ನಡೆಯುವ ಮತದಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುವ ಜಿಲ್ಲಾ ಸ್ವೀಪ್‌ ಸಮಿತಿಯ ವಿಶೇಷ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಅವರು ಸೋಮವಾರ ತಲ್ಲೂರು ಗ್ರಾ.ಪಂ. ನ ಉಪ್ಪಿನಕುದ್ರುವಿನಲ್ಲಿ 101 ವರ್ಷದ ಆಲಿಸ್‌ ಅವರಿಗೆ ಆಹ್ವಾನ ಪತ್ರ ನೀಡಿದರು.

Advertisement

ಈ ಸಂದರ್ಭ ಮಾತನಾಡಿದ ಜಿಲ್ಲಾಧಿ ಕಾರಿಗಳು, ಇದು ವಿಶೇಷ ಅಭಿಯಾನ. ಈವರೆಗಿನ ಎಲ್ಲ ಚುನಾವಣೆಗಳಲ್ಲಿ ಭಾಗವಹಿಸಿ ರುವ ಆಲಿಸ್‌ ಅವರನ್ನು ಸಮ್ಮಾನಿಸಿದ್ದೇವೆ. ಇದೊಂದು ಖುಷಿಯ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡ ಹಬ್ಬ. ಇವರು ಪ್ರತೀ ಚುನಾವಣೆಯಲ್ಲೂ ಭಾಗವಹಿಸಿದ್ದಾರೆ. ಇಂತಹ ಶತಾಯುಷಿ ಮತ ದಾರರು ನಮ್ಮ ಜಿಲ್ಲೆಯ ಹೆಮ್ಮೆ. ಉಡುಪಿ ಜಿಲ್ಲೆಯ ಮತದಾರರು ತಾವೆಲ್ಲರೂ ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿ ದೆಯೇ ಅನ್ನುವುದನ್ನು ನಮ್ಮ ಸಹಾಯ ವಾಣಿ, ಮತಗಟ್ಟೆ ಅಧಿಕಾರಿಗಳ ಬಳಿ ಖಚಿತಪಡಿಸಿಕೊಳ್ಳಿ ಎಂದು ಮತದಾರರಿಗೆ ಹೇಳಿದರು.

ಮತದಾನ ಮಾಡಿ
ಇದೇ ವೇಳೆ 101 ವರ್ಷದ ಆಲಿಸ್‌ ಅವರು ಸಮ್ಮಾನ ಸ್ವೀಕರಿಸಿ, ನಾನು ಪ್ರತೀ ಸಲ ಮತದಾನ ಮಾಡಿದ್ದೇನೆ. ನೀವೆಲ್ಲ ಮತದಾನ ಮಾಡಿ. ಎಲ್ಲರೂ ಮತದಾನದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು. ಆಲಿಸ್‌ ಅವರ ಪಕ್ಕದ ಮನೆಯ ಹುಡುಗ 19 ವರ್ಷದ ನಿಶಾಂತ್‌ ಪ್ರಥಮ ಬಾರಿಗೆ ಈ ಬಾರಿ ಮತ ಚಲಾಯಿಸುತ್ತಿದ್ದು, ಈ ವಿಶೇಷ ಆಹ್ವಾನ ಪತ್ರವನ್ನು ಅವರೇ ಓದಿದ್ದು ವಿಶೇಷ.

ಜಿ.ಪಂ. ಸಿಇಒ ಪ್ರಸನ್ನ ಎಚ್‌., ಕುಂದಾಪುರ ಎಸಿ ರಶ್ಮಿ ಎಸ್‌.ಆರ್‌., ಕುಂದಾಪುರ ತಹಶೀಲ್ದಾರ್‌ ಶೋಭಾಲಕ್ಷ್ಮೀ, ತಾ.ಪಂ. ಇಒ ಮಹೇಶ್‌ ಹೊಳ್ಳ, ತಲ್ಲೂರು ಗ್ರಾ.ಪಂ. ಪಿಡಿಒ ನಾಗರತ್ನ, ವಿಎ ಹರೀಶ್‌, ಬಿಎಲ್‌ಒ ನಾರಾಯಣ್‌ ಉಪಸ್ಥಿತರಿದ್ದರು.

Advertisement

ಅಜ್ಜಿಗೆ ಪರಿಚಯಿಸಿಕೊಂಡ ಡಿಸಿ
ಆಲಿಸ್‌ ಅವರಲ್ಲಿ ಕುಶಲೋಪರಿ ನಡೆಸಿದ ಜಿಲ್ಲಾಧಿಕಾರಿಗಳು, ನಾನು ನಿಮ್ಮ ಜಿಲ್ಲಾಧಿಕಾರಿ. ಇವರು ಜಿ.ಪಂ. ಸಿಇಒ ಎನ್ನುವುದಾಗಿ ಪರಿಚಯಿಸಿಕೊಂಡರು. ನಿಮ್ಮಿಂದ ಇಡೀ ಜಿಲ್ಲೆಯ ಜನರಿಗೆ ಮತದಾನದಲ್ಲಿ ಭಾಗವಹಿಸುವಂತೆ ಒಂದು ಸಂದೇಶ ಬೇಕಿದೆ. ನಿಮ್ಮ ಇಷ್ಟು ವರ್ಷದ ಮತದಾನದ ಅನುಭವ ಹೇಗಿದೆ? ಓಟು ಹಾಕಲು ಎಷ್ಟು ದೂರವಿದೆ. ಹೇಗೆ ಹೋಗುತ್ತಿದ್ದೀರಿ ಎನ್ನುವುದಾಗಿ ಕೇಳಿದರಲ್ಲದೆ, ನಿಮಗೆ ಮನೆಯಿಂದಲೇ ಈ ಬಾರಿ ಮತದಾನ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next