ಚಿಂಚೋಳಿ: ತಾಲೂಕಿನ ತೆಲಂಗಾಣ ಗಡಿಪ್ರದೇಶದಲ್ಲಿ ಇರುವ ಕುಂಚಾವರಂ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಬಾಲಕರ ವಸತಿ ನಿಲಯ ಮತ್ತು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸ್ಮಶಾನ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.
ಕುಂಚಾವರಂ ಸಮಾಜ ಕಲ್ಯಾಣ ಇಲಾಖೆ ಆಧೀನದಲ್ಲಿರುವ ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕುಡಿಯುವ ನೀರು, ಶೌಚಾಲಯ, ಮಕ್ಕಳು ಮಲಗುವ ಕೋಣೆಯನ್ನು ಪರಿಶೀಲಿಸಿದರು.
ನಂತರ ಮೇಲ್ವಿಚಾರಕರಿಗೆ ಮಕ್ಕಳ ಸಂಖ್ಯೆ ಎಷ್ಟಿದೆ, ಎಷ್ಟು ಮಕ್ಕಳಿಗೆ ಊಟ, ಉಪಹಾರ ನೀಡಲಾಗಿದೆ ಎಂದು ಪ್ರಶ್ನಿಸಿದರು. ಕೊರೊನಾದಿಂದ ಕೇವಲ 25 ಮಕ್ಕಳಿಗೆ ಊಟ, ಉಪಹಾರ ಮಾಡಲಾಗಿದೆ ಎಂದು ಸಮಾಜ ಕಲ್ಯಾಣಾಧಿ ಕಾರಿಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಮಕ್ಕಳಿಗೆ ಯಾವ ಊಟ ಹಾಕಿದ್ದಿರಿ ತೋರಿಸಿ ಎಂದು ಅಡುಗೆ ಕೋಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಉಪಹಾರ ಕಂಡು ಬಾರದ ಕಾರಣ ಮೇಲ್ವಿಚಾರಕರು ಮತ್ತು ಸಮಾಜ ಕಲ್ಯಾಣಾಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿ ಕಾರಿಗಳು ಅಲ್ಲಿನ ಮಕ್ಕಳೊಂದಿಗೆ ಕುಳಿತು ಹೆಸರು ಕಾಳು ತಿಂದು ಹರ್ಷ ವ್ಯಕ್ತಪಡಿಸಿದರು. ಮಕ್ಕಳ ಸಂಖ್ಯೆ ಮತ್ತು ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಸರಕಾರ ನೀಡುವ ಪೌಷ್ಟಿಕ ಆಹಾರ ಕುರಿತು ಸಿಡಿಪಿಒ ಗುರುಪ್ರಸಾದ ಕವಿತಾಳ ಅವರನ್ನು ವಿಚಾರಿಸಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಿಂದ ಪೌಷ್ಟಿಕ ಆಹಾರ ಪಡೆದುಕೊಂಡಿರುವ ಗರ್ಭಿಣಿಯೊಬ್ಬರ ಮನೆಗೆ ಭೇಟಿ ನೀಡಿ ಚರ್ಚಿಸಿದರು. ಕುಂಚಾವರಂ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಆರೋಗ್ಯ ಸೇವೆಗಳ ಸೌಲಭ್ಯ ಕುರಿತು ತಾಲೂಕು ಆರೋಗ್ಯಾ ಧಿಕಾರಿ ಡಾ| ಮಹ್ಮದ್ ಗಫಾರ ಅಹಮೆದ್ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಕೊರೊನಾ ವ್ಯಾಕ್ಸಿನ್ ಕುರಿತು ಕೇಳಿದಾಗ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗಿದೆ ಎಂದು ವೈದ್ಯರು ತಿಳಿಸಿದರು. ನಂತರ ಜಿಲ್ಲಾಧಿಕಾರಿಗಳು ಕುಂಚಾವರಂ ಸರ್ಕಾರಿ ಪ್ರೌಢಶಾಲೆ ಹತ್ತಿರ ಇರುವ ಸ್ಮಶಾನ ಭೂಮಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ತಾಪಂ ಅಧಿ ಕಾರಿ ಅನಿಲಕುಮಾರ ರಾಠೊಡ, ಸಿಡಿಪಿಒ ಗುರುಪ್ರಸಾದ, ಭೂಮಾಪನಾಧಿ ಕಾರಿಗಳು, ಡಿವೈಎಸ್ಪಿ ಈ.ಎಸ್.ವೀರಭದ್ರಯ್ಯ, ಸಿಪಿಐ ಮಹಾಂತೇಶ ಪಾಟೀಲ, ಎಇಇ ಮಹ್ಮದ್ ಅಹೆಮದ್ ಹುಸೇನ, ಎಇಇ ಗುರುರಾಜ ಜೋಶಿ, ಎಇಇ ಶಿವಶರಣಪ್ಪ ಕೇಶ್ವಾರ, ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ್, ಕುಂಚಾವರಂ ಪಿಎಸ್‌ಐ ಉಪೇಂದ್ರಕುಮಾರ ಭಾಗವಹಿಸಿದ್ದರು.