ರಾಯಚೂರು: ಜಿಲ್ಲಾದ್ಯಂತ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಯಾವುದೇ ಅಡಚಣೆಯಾಗದಂತೆ ಸುಸೂತ್ರವಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫೆರೆನ್ಸ್ ಹಾಲ್‌ನಲ್ಲಿ ಬುಧವಾರ ತಹಶೀಲ್ದಾರರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಪರೀಕ್ಷೆಯಲ್ಲಿ ನಕಲಿಗೆ ಅವಕಾಶ ನೀಡಬಾರದು. ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿ ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಪರೀಕ್ಷೆ ನಡೆಸಬೇಕು. ಸಂಚಾರಿ ಜಾಗೃತ ದಳ ಅಧಿಕಾರಿಗಳು ಕಡ್ಡಾಯವಾಗಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಬೇಕು. ಎಲ್ಲ ಅಧಿಕಾರಿಗಳ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಪರೀಕ್ಷಾ ಮೇಲ್ವಿಚಾರಕರು ಮೊಬೈಲ್ ಬಳಸಬಾರದು. ಪರೀಕ್ಷಾ ಕೇಂದ್ರದ 200 ಮೀಟರ್ ಆವರಣದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಹೊರಗಿನವರನ್ನು ಕೇಂದ್ರದೊಳಗೆ ಬಿಡಬಾರದು ಎಂದರು.
ಸಂಚಾರಿ ಜಾಗೃತ ದಳ ಮತ್ತು ಸ್ಥಳೀಯ ಜಾಗೃತದಳ ಅಧಿಕಾರಿಗಳು ನಕಲಿಗೆ ಆಸ್ಪದ ನೀಡಬಾರದು. ಪ್ರಶ್ನೆ ಪತ್ರಿಕೆ ಹಂಚಿಕೆ, ಪರೀಕ್ಷೆ ಸೇರಿದಂತೆ ಪ್ರತಿಯೊಂದನ್ನು ವಿಡಿಯೋ ಮಾಡಬೇಕು. ಪರೀಕ್ಷಾ ಪ್ರಕ್ರಿಯೆಯ ಪ್ರತಿ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದರು.
ಪರೀಕ್ಷಾಕೇಂದ್ರಗಳಲ್ಲಿ ಪೇಪರ್ ಗ್ಲಾಸ್ ಗಳನ್ನೇ ಬಳಸಬೇಕು. ಶೌಚಗೃಹಗಳು ಶುಚಿಯಾಗಿರಬೇಕು. ಆರೋಗ್ಯ ವಿಚಾರದಲ್ಲಿ ಲೋಪಗಳಾದರೆ ಆರೋಗ್ಯಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಎಲ್ಲ ತಹಶೀಲ್ದಾರರು ಕಡ್ಡಾಯವಾಗಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವರದಿ ಮಾಡಬೇಕು. ತಮ್ಮ ವ್ಯಾಪ್ತಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಯಾದ ಸಾರಿಗೆ ವ್ಯವಸ್ಥೆಯಾಗಿದೆಯಾ ಅಥವಾ ಏನಾದರೂ ಸಮಸ್ಯೆಗಳಿದ್ದರೆ ಪರಿಶೀಲಿಸುವಂತೆ ತಿಳಿಸಿದರು.
ಎಡಿಸಿ ದುರುಗೇಶ, ಹೆಚ್ಚುವರಿ ಎಸ್‌ಪಿ ಶ್ರೀಹರಿಬಾಬು, ಎಸಿ ಸಂತೋಷ ಕಾಮಗೌಡ, ತಹಶೀಲ್ದಾರರಾದ ಡಾ| ಹಂಪಣ್ಣ, ಶ್ರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ಸೇರಿದಂತೆ ಇತರರಿದ್ದರು.