ದೇವನಹಳ್ಳಿ: ಜಿಲ್ಲಾಧಿಕಾರಿಗೆ ಕೋವಿಡ್ 19 ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ತಾಲೂಕಿನ ಬೀರಸಂದ್ರದ ಸಮೀಪದ ಜಿಲ್ಲಾಡಳಿತ ಭವನವನ್ನು 48 ಗಂಟೆಗಳವರೆಗೆ ಸೀಲ್‌ಡೌನ್ ಮಾಡಿ ಆದೇಶಿಸಲಾಗಿದೆ. ಎಲ್ಲ ಅಧಿಕಾರಿಗಳು, ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ನೂರಾರು ಜನ ಸಾರ್ವಜನಿಕರು ಬರುವುದರಿಂದ ಜಿಲ್ಲಾಡಳಿತ ಭವನದ ಎಲ್ಲ ಕಚೇರಿಗಳ ಒಳಾಂಗಣ ಮತ್ತು ಹೊರಾಂಗಣ ಸ್ಯಾನಿಟೈಸ್‌ಗೊಳಿಸಲಾಗಿದೆ.
ಈ ಅವಧಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಚೇರಿ ಆವರಣದಲ್ಲಿ ಹಾಜರಾಗುವಂತಿಲ್ಲ ಎಂದು ಸ್ಪಷ್ಟ ಪಡಿಸಿದೆ. ಜತೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ, ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಆದೇಶಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಚೇರಿ ಕಾವಲುಗಾರರು ಮಾತ್ರ ಕಟ್ಟಡದ ಹೊರಭಾಗದಲ್ಲಿ ಹಾಜರಿದ್ದು, ಕಾವಲು ಕಾಯಲು ಮತ್ತು ಕಚೇರಿಯ ಹೊರ ಆವರಣದ ಗೇಟನ್ನು ಸಂಪೂರ್ಣವಾಗಿ ಮುಚ್ಚಲು ಕಾವಲುಗಾರರಿಗೆ ಸೂಚಿಸಲಾಗಿದೆ.
ಎಲ್ಲ ಕಚೇರಿ ಶುಚಿಗೊಳಿಸಬೇಕು ಎಂದು ಜಿಲ್ಲಾಡಳಿತ ಭವನದ ಮೇಲ್ವಿಚಾರಕರಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗೆ ಕೋವಿಡ್ 19 ಪಾಸಿಟಿವ್ ವರದಿಯಾಗುತ್ತಿದ್ದಂತೆ, ಕೆಲವು ಅಧಿಕಾರಿಗಳಲ್ಲಿ ಆತಂಕ ಮನೆ ಮಾಡಿದೆ. ಮೂರು ದಿನದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದಿರಲಿಲ್ಲ. ಹೀಗಾಗಿ ಭಯಪಡುವ ಆತಂಕವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಡೀಸಿ ಕಚೇರಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ, ಸ್ಯಾನಿಟೈಸ್‌ಗೊಳಿಸಲಾಗಿದೆ.
ಸೋಂಕು ತಗುಲಿದ್ದ ಅಧಿಕಾರಿಗಳ ಜೊತೆ ನೇರ ಸಂಪರ್ಕದಲ್ಲಿದ್ದ 4 ತಾಲೂಕಿನ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಇಲಾಖೆಗಳ ಉಪನಿರ್ದೇಶಕ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಯನ್ನು ಕ್ವಾರಂಟೈನ್ ಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಆದರೆ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವುದು ಕಗ್ಗಂಟಾಗಿದೆ.
32 ಮಂದಿಗೆ ಬಿಡುಗಡೆ ಭಾಗ್ಯ: ಕೋವಿಡ್ 19 ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವುದರ ನಡುವೆ ಜಿಲ್ಲೆಯಲ್ಲಿ 32 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 46 ಜನರು ಸೋಂಕಿನಿಂದ ಗುಣಮುಖರಾಗಿದ್ದು, 113 ಪ್ರಕರಣಗಳು ಸಕ್ರಿಯವಾಗಿವೆ.
ಜಿಲ್ಲಾಡಳಿತ ಭವನವನ್ನು ಸ್ಯಾನಿಟೈಸ್‌ಗೊಳಿಸಲಾಗಿದೆ. ಇಲ್ಲಿನ ಪ್ರತಿ ಸಿಬ್ಬಂದಿಗೆ ಕೋವಿಡ್ 19 ಸೋಂಕು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರಿಸ್ಥಿತಿ ಆಧರಿಸಿ ಸೀಲ್‌ಡೌನ್ ಪ್ರಕ್ರಿಯೆ ನಡೆಯಲಿದೆ.
-ಡಾ.ಜಗದೀಶ್ ಕೆ.ನಾಯಕ್, ಅಪರ ಜಿಲ್ಲಾಧಿಕಾರಿ