Advertisement

ಕೆರೆ, ಕುಂಟೆ, ಕಲ್ಯಾಣಿ ಅಭಿವೃದ್ದಿಗೆ ಯೋಜನೆ  

04:46 PM Feb 12, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜಲ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕೆರೆ, ಕುಂಟೆ, ಕಲ್ಯಾಣಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದ್ದು, ಈ ಸಂಬಂಧ ಅಭಿವೃದ್ಧಿಪಡಿಸಬಹುದಾದ ಕಲ್ಯಾಣಿ, ಚೆಕ್‌ಡ್ಯಾಂಗಳ ಸಮಗ್ರ ಯೋಜನಾ ವೆಚ್ಚದ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೆರೆಗಳು ಮತ್ತು ಕಲ್ಯಾಣಿಗಳ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಗುರುವಾರ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶ್ರಮದಾನ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಮೂಲಕ ಜಲಮೂಲಗಳ ಸಂರಕ್ಷಣೆಗೆ ಚಿಂತನೆ ಮಾಡಲಾಗಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತದೊಂದಿಗೆ ಎನ್‌ಸಿಸಿ, ಎನ್‌ ಎಸ್‌ಎಸ್‌, ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸೇರಿದಂತೆ ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಕಲ್ಯಾಣಿ ಅಭಿವೃದ್ಧಿ: ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 15 ಕಲ್ಯಾಣಿಗಳಿದ್ದು, ಈ ಪೈಕಿ 3 ಕಲ್ಯಾಣಿಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಇನ್ನೂ 12 ಕಲ್ಯಾಣಿಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕಾಗಿದ್ದು, ಡಿಎಂಎಫ್‌ಟಿ ಮತ್ತು ವಿಶೇಷ ಅನುದಾನದ ಮೂಲಕ ಅಭಿವೃದ್ಧಿಪಡಿಸಲಾಗುವುದು. ಇದರ ಜತೆಗೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಕೂಡ ಲಭ್ಯವಿರುವ ಅನುದಾನದ ಜತೆಗೆ ಸ್ಥಳೀಯ ದಾನಿಗಳ ಮೂಲಕವೂ ಕಲ್ಯಾಣಿ, ಚೆಕ್‌ ಡ್ಯಾಂಗಳನ್ನು ಅಭಿವೃದ್ಧಿ ಕೈಗೊಳ್ಳಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಿಪಿಆರ್‌ ವರದಿ ಸಲ್ಲಿಸಿ: ಚಿಕ್ಕಬಳ್ಳಾಪುರ ಹೊರವಲಯದ ರಂಗಸ್ಥಳವು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ವಿವಿಧ ಕಡೆಯಿಂದ ನೂರಾರು ಭಕ್ತರು ಬಂದು ಹೋಗುತ್ತಾರೆ. ಹಾಗಾಗಿ ಈ ಸ್ಥಳವನ್ನು ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದಾಗಿದ್ದು, ಈ ಸಂಬಂಧ ಇಲ್ಲಿನ 3 ಕಲ್ಯಾಣಿಗಳ ಅಭಿವೃದ್ಧಿ, ಉದ್ಯಾನವನ ನಿರ್ಮಾಣ, ಶೌಚಾಲಯ ಮತ್ತು ಸ್ನಾನದ ಗೃಹಗಳ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಎಷ್ಟು ಅನುದಾನ ಅಗತ್ಯವಿದೆ ಎಂಬುದರ ಡಿಪಿಆರ್‌ ತಯಾರಿಸಿ, 2-3 ದಿನದೊಳಗೆ ಸಲ್ಲಿಸಿ ಎಂದು ಪಿಆರ್‌ ಇಡಿ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ :ಹೆದ್ದಾರಿಯನ್ನು ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವರಿಗೆ ಮನವಿ

Advertisement

ಗುಡಿಬಂಡೆ ಪಟ್ಟಣದಲ್ಲಿನ 4 ಕಲ್ಯಾಣಿಗಳನ್ನು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿಗಳಾದ ವಿಜಯಲಕ್ಷ್ಮೀ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿ ನಂಜುಂಡಸ್ವಾಮಿ, ನಗರಸಭೆ ಪೌರಾಯುಕ್ತರಾದ ಲೋಹಿತ್‌ ಕುಮಾರ್‌, ಸಣ್ಣ ನೀರಾವರಿ ಇಲಾಖೆ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next