ಬೀದರ: ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾ ಧಿಕಾರಿ ರಾಮಚಂದ್ರನ್ ಆರ್. ಅಧ್ಯಕ್ಷತೆಯಲ್ಲಿ ನಡೆದವಿಡಿಯೋ ಸಂವಾದದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳು ಮತ್ತು ವಸತಿ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಡಿಸಿ, ನಗರೋತ್ಥಾನ ಹಂತ-3, ನಗರೋತ್ಥಾನ ವಿಶೇಷ ಮತ್ತು ನಗರೋತ್ಥಾನ ಪ್ರೋತ್ಸಾಹ ಧನದ ಕಾಮಗಾರಿಗಳ ಪ್ರಗತಿಗೆ ಅಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕು. ಬೀದರ ನಗರದಲ್ಲಿ ಈ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತ್ವರಿತಗತಿಯಲ್ಲಿ ಮತ್ತು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಒತ್ತು ಕೊಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಂಬೇಡ್ಕರ್ ವಸತಿ ಯೋಜನೆ, ವಾಜಪೇಯಿ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಗಳು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನವಾಗಬೇಕು. ವಸತಿ ಯೋಜನೆಗಳ ಅನುಷ್ಠಾನ ಕಾರ್ಯ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿ ಕಾರಿಗಳು ಪೌರಾಯುಕ್ತರುಮತ್ತು ಮುಖ್ಯಾ ಧಿಕಾರಿಗಳಿಗೆ ತಿಳಿಸಿದರು. ಸಂವಾದದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟಪ್ಪಗೋಳ, ಬೀದರ,ಬಸವಕಲ್ಯಾಣ ನಗರಸಭೆ ಪೌರಾಯುಕ್ತರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.
ವರದಿ ಜಾರಿಗೆ ತಮಟೆ ಚಳವಳಿ :
ಭಾಲ್ಕಿ: ಮಳಚಾಪುರ ಗ್ರಾಪಂ ಆವರಣದಲ್ಲಿ ನ್ಯಾ| ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ಪದಾಧಿಕಾರಿಗಳು ತಮಟೆ ಚಳವಳಿ ನಡೆಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಸದಾಶಿವ ವರದಿಯಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ, ಎ.ಬಿ.ಸಿ.ಡಿ ವರ್ಗೀಕರಣ ಅನುಷ್ಠಾನಗೊಳಿಸುವಂತೆ ಕಳೆದ 25 ವರ್ಷಗಳಿಂದ ಹೋರಾಡುತ್ತ ಬಂದಿದ್ದೇವೆ. ಆದರೆ ಯಾವ ಸರ್ಕಾರವೂ ಮೀಸಲಾತಿ ವರದಿ ಅನುಷ್ಠಾನ ಗೊಳಿಸಿಲ್ಲ. ಸದಾಶಿವ ಆಯೋಗದ ವರದಿ ತಕ್ಷಣ ಜಾರಿಗೆ ಬರಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಮಾದಿಗ ಸಮಾಜದಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಶಿವಾನಂದ ಕರಡ್ಯಾಳ, ರಾಜು ಕಡ್ಯಾಳ, ಯಲಿಶ ಜಾಂತೆ, ಸಲಿವಾನ ಕೆಳಕೆರೆ, ಸಂಜುಕುಮಾರ ಸೈನೂರೆ, ಪ್ರಭು ಬೀರಿ(ಬಿ), ಭಾಸಕ್ರ ತಳವಾಡ, ನಾಗೇಂದ್ರ ಲಂಜವಾಡ, ನಿವುರ್ತಿ ಭಾತಂಬ್ರ, ಬಾಲಾಜಿ ಬಿರಿ (ಬಿ), ರಾಜಕುಮಾರ ಧನ್ನೂರ, ಪ್ರಭು ಧನ್ನೂರ ಇತರರು ಇದ್ದರು.