ಜೇವರ್ಗಿ: ಭೀಮಾನದಿ ಪ್ರವಾಹದಿಂದ ತತ್ತರಿಸಿರುವ ತಾಲೂಕಿನ ನರಿಬೋಳ ಹಾಗೂ ಕಟ್ಟಿಸಂಗಾವಿ ಗ್ರಾಮಕ್ಕೆ ಶುಕ್ರವಾರ ಜಿಲ್ಲಾಧಿ ಕಾರಿ ವಿ.ವಿ. ಜೋತ್ಸ್ನಾ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ಭೀಮಾ ಪ್ರವಾಹದಿಂದ ತತ್ತರಿಸಿ ಆಶ್ರಯ ಪಡೆದಿರುವ ನರಿಬೋಳ ಗ್ರಾಮದ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆಯ ಕಾಳಜಿ ಕೇಂದ್ರಕ್ಕೆ ಭೇಟಿನೀಡಿದ ಜಿಲ್ಲಾಧಿಕಾರಿಗಳು, ಊಟೋಪಚಾರ ಮತ್ತು ಮೂಲ ಸೌಕರ್ಯ ಕಲ್ಪಿಸಿರುವ ಬಗ್ಗೆ ಸ್ವತಃ ಸಂತ್ರಸ್ತರಿಂದಲೇ ಮಾಹಿತಿ ಪಡೆದರು. ನಂತರ ಸಂತ್ರಸ್ತರ ಜೊತೆ ಕುಳಿತು ಊಟ ಮಾಡಿದರು. ಸಂತ್ರಸ್ತರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆ ಹಾಲು, ಮಕ್ಕಳಿಗೆ ಬಿಸ್ಕೀಟ್ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ನೀರು ಇಳಿಮುಖವಾಗುತ್ತಿದ್ದು, ಸಂಪೂರ್ಣ ನೀರಿನ ಮಟ್ಟ ಕಡಿಮೆಯಾಗುವವರೆಗೂ ಕಾಳಜಿ ಕೇಂದ್ರದಲ್ಲಿಯೇ ಇರಬೇಕು. ನೀವು ನಿಮ್ಮ ಮನೆಯನ್ನು ಸಂಪೂರ್ಣ ಸ್ವತ್ಛಗೊಳಿಸಿದ ಎರಡು ದಿನಗಳ ನಂತರ ತೆರಳಬೇಕು ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂತ್ರಸ್ತರಿಗೆ ಡಿ.ಸಿ ಜೋತ್ಸ್ನಾ ತಿಳಿಸಿದರು.
ನಂತರ ತಾಲೂಕಿನ ಕಟ್ಟಿಸಂಗಾವಿ ಗ್ರಾಮಕ್ಕೆ ತೆರಳಿ ನೆರೆ ಹಾವಳಿಯಿಂದ ಹಾನಿಗೀಡಾದ ಪ್ರದೇಶ ವೀಕ್ಷಿಸಿದ ಅವರು, ನೆರೆ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಕುಡಿಯುವ ನೀರನ್ನು ಕುದಿಸಿಆರಿಸಿ ಕುಡಿಯಬೇಕು ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಸೇವಿಸಬೇಕೆಂದು ಸಲಹೆ ನೀಡಿದರು.
ಸಾಂಕ್ರಾಮಿಕ ರೋಗಗಳ ತಡೆಯುವ ಕುರಿತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜನತೆಗೆ ಡಂಗೂರ ಸಾರಿ ಅರಿವು ಮೂಡಿಸಬೇಕೆಂದುಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.ಇಂತಹ ನೀರಿರುವ ಜಾಗಗಳಲ್ಲಿ ಬ್ಲೀಚಿಂಗ್ ಪೌಡರ್‌ಸಿಂಪರಣೆ ಹಾಗೂ ಫಾಗಿಂಗ್ ಮೂಲಕ ಸೊಳ್ಳೆಗಳ ಉತ್ಪತ್ತಿಯಾಗದಂತೆ ತಡೆಯಬೇಕು ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಿಇಒ ಡಾ| ಪಿ.ರಾಜಾ ಮಾತನಾಡಿ, ಆರೋಗ್ಯ ಶಿಬಿರಗಳನ್ನು ತೆರೆಯುವ ಮೂಲಕ ಪ್ರವಾಹ ಸಂತ್ರಸ್ತರ ಆರೋಗ್ಯ ತಪಾಸಣೆಮಾಡಬೇಕು. ಪ್ರಸಕ್ತ ಕೋವಿಡ್ ಸೋಂಕುಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ತಹಶೀಲ್ದಾರ್ ಸಿದರಾಯ ಭೋಸಗಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ದು ಪಾಟೀಲ, ತಾಪಂ ಇಒ ವಿಲಾಸರಾಜ ಇದ್ದರು.