ಮಳೆ ಎಂದ ಕೂಡಲೇ ಮನಸ್ಸು ಬಾಲ್ಯದತ್ತ ಜಾರುತ್ತದೆ. ಮಳೆ ನೋಡಿನ ತತ್‌ಕ್ಷಣ ಮಳೆಯಲ್ಲಿ ಹೆಜ್ಜೆ ಹಾಕೋಣ….ಮೈ ಮನದ ಪುಳಕ ಹೆಚ್ಚಿಸೋಣ…. ಮತ್ತೆ ಮಕ್ಕಳಾಗೋಣ ಎನಿಸುತ್ತದೆ.
ಮಳೆ ಹನಿಗಳು ನೆಲಕ್ಕೆ ಬಿದ್ದ ಕ್ಷಣ ಬಾಲ್ಯದ ನೂರಾರು ನೆನಪುಗಳು ಕಣ್ಣೆದುರು ಬರುತ್ತವೆ. ಚಿಕ್ಕವರಿದ್ದಾಗ ಮಳೆ ನೀರನ್ನು ತದೇಕ ಚಿತ್ತದಿಂದ ಗಮನಿಸುತ್ತಿದ್ದೆವು. ಅದರಲ್ಲೂ ನೀಲಿ ಬಾನಲ್ಲಿ ನೀರು ತುಂಬಿದ್ದಾದರೂ ಹೇಗೆ? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಅಷ್ಟೊಂದು ನೀರು ಸಂಗ್ರಹಿಸಲು ಅಲ್ಲಿ ಕೆರೆ, ನದಿಗಳು ಇರಬಹುದೇ.. ಹೀಗೆ ಪ್ರಶ್ನೆಗಳ ಸರಮಾಲೆ ಬೆಳೆದು ಅದಕ್ಕೆ ಉತ್ತರವನ್ನು ನಮ್ಮ ವಿಜ್ಞಾನದ ಶಿಕ್ಷಕರಿಂದ ಉತ್ತರ ಪಡೆಯುತ್ತಿದ್ದೆವು. ಮನೆಯಲ್ಲಿ ಅಪ್ಪ- ಅಮ್ಮ ಇಲ್ಲ ಅಂದರೆ ಮುಗ್ಧ ಮನಸಿಗೆ ಹಬ್ಬವಿದ್ದಂತೆ. ಮಳೇಲಿ ನೆನೆಯೋದು, ನಿಂತ ನೀರಲ್ಲಿ ಕುಣಿದು ನೀರನ್ನ ಚಿಮ್ಮಿಸೋದು, ಒಬ್ಬರ ಮೇಲೊಬ್ಬರು ಮಳೆ ನೀರನ್ನು ಎರಚುವುದು ನೆನೆಯುತ್ತಿದ್ದರೆ ದಿನ ಸಾಲದು.
ಹರಿಯುವ ಮಳೆ ನೀರಲ್ಲಿ ಕಾಗದದ ದೋಣಿ ಮಾಡಿ ಆ ದೋಣೀಲಿ ಹೆಸರನ್ನು ಗೀಚಿ ಬರೆದು ನೀರಲ್ಲಿ ತೇಲಿ ಬಿಟ್ಟು, ಕೈ ತಟ್ಟಿ ನೆಲ ಬಿಟ್ಟು ಕುಣಿದ ಆ ಖುಷಿಗೆ ಎಲ್ಲೆ ಇಲ್ಲ. ಬಾಲ್ಯದ ಆ ಹಸಿ ನಿಶ್ಕಲ್ಮಶ ಪುಟ್ಟ ಮನಸು ಹಾಗೇ ಅಲ್ವ. ಮಗುವಿನಂತ ಮನಸಿಗೆ, ಗುಬ್ಬಚ್ಚಿಯಂತ ಖುಷಿ ಸಾಕು. ಮಳೆಯಲ್ಲಿ ನಿಂತ ಕೆಸರೊಂದಿಗೆ ಆಟವಾಡಿ ಕಾಲು ನಂಜು ಆದಾಗ ಅಮ್ಮನಿಂದ ಬೈಗುಳ ಕೇಳುವಾಗ ಮಳೆರಾಯನ ಮೇಲೆ ಕೆಲವೊಮ್ಮೆ ಕೋಪ ಬಂದದ್ದು ಇದೆ. ಆದರೆ ಅದು ಕ್ಷಣ ಮಾತ್ರವಾಗಿತ್ತು ಮತ್ತೆ ಮೊಡದ ಮರೆಯಲ್ಲಿ ಮೇಘರಾಜ ಬರುವನೆಂದು ಸೂಚನೆ ಸಿಕ್ಕಿದ್ದೇ ತಡ ಮತ್ತೆ ಮೇಘರಾಜನೊಂದಿಗೆ ನಾವೆಲ್ಲ ಸಂಧಾನ ಮಾಡಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ಅತಿಯಾಗಿ ಮಳೆ ಬಂದು ಶಾಲೆಗೆ ರಜೆ ಘೋಷಿಸಿದಾಗ ಖುಷಿ ಪಟ್ಟಿದ್ದು ಇದೆ. ಆದರೆ ಪ್ರಕೃತಿ ಹಾನಿ ಕಂಡಾಗ ಮನಸ್ಸಿಗೆ ಬೇಸರವೂ ಆಗುತ್ತಿತ್ತು. ಮಳೆಯೊಂದು ಪ್ರಕೃತಿಯ ವಿಸ್ಮಯವೂ ಹೌದು, ಅದೇ ರೀತಿ ಪ್ರಕೃತಿಯ ಜೀವಾಳವೂ ಹೌದು. ಈ ಬಾರಿ ಆಕ್ಸಿಜನ್ ಅಭಿಯಾನ ಎಲ್ಲೆಡೆ ನಡೆಯುತ್ತಿದ್ದು ಮಳೆ ಬರುವ ಮುನ್ನ ಸಸಿ ನೆಟ್ಟು ಬೆಳೆಸಿ ನಮ್ಮ ಸುತ್ತಮುತ್ತ ಪ್ರದೇಶದಲ್ಲಿ ಹಸುರು ರಂಗನ್ನು ಕಂಪಿಸೋಣ.
ಗಿರೀಶ ಜೆ.
ತುಮಕೂರು ವಿವಿ