ಮುಂಬಯಿ: ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಜುಹೂ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಅವರ ನೇತೃತ್ವದಲ್ಲಿ ಎಟಿಎಸ್ ತಂಡವು ಫೆ. 19ರಂದು ಪುಣೆಯಲ್ಲಿರುವ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿ ಸುಮಾರು 4.2 ಕೋಟಿ ರೂ. ಮೌಲ್ಯದ ಎಂಡಿ (ಮೆಫೆಡ್ರೋನ್) ಡ್ರಗ್ಸ್ ಅನ್ನು ಜಪ್ತಿ ಮಾಡಿದೆ.
ಕಳೆದ ವರ್ಷದ ಡಿ. 6ರಂದು ಎಟಿಎಸ್‌ನ ತಂಡವು ಎಂಡಿ ಪೌಡರ್‌ನ ಅಕ್ರಮ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮಹೇಂದ್ರ ಪರಶುರಾಮ್ ಪಾಟೀಲ್ (49) ಮತ್ತು ಸಂತೋಷ್ ಬಾಳಾಸಾಹೇಬ್ ಅಡ್ಕೆ (29) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂಬಯಿಯ ವಿಲೇಪಾರ್ಲೆ ಮತ್ತು ಪುಣೆಯ ಸಾಸ್ವಾಡ್‌ನಿಂದ 5.70 ಕೋಟಿ ರೂ. ಮೌಲ್ಯದ 14.300 ಕೆ.ಜಿ. ಮೆಫೆಡ್ರೋನ್ ಪೌಡರ್ ಅನ್ನು ಜಪ್ತಿ ಮಾಡಿತ್ತು. ಇದಾದ ಅನಂತರ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಪ್ರಸ್ತುತ ಇಬ್ಬರೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಪ್ರಕರಣದ ಹೆಚ್ಚುವರಿ ತನಿಖೆಯ ವೇಳೆ ಎಟಿಎಸ್ ಜಹೂ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಾಗರ್ ಕುಣ್ಗಿರ್ ಅವರು ಬಂಧಿತ ಆರೋಪಿ ಸಂತೋಷ್ ಬಾಳಾಸಾಹೇಬ್ ಅಡ್ಕೆಯ ಚಟುವಟಿಕೆಗಳ ಬಗ್ಗೆ ಆಳವಾಗಿ ತನಿಖೆ ನಡೆಸಿದಾಗ ಆತ ಪುಣೆಯ ಪುರಂದರ್ ತಾಲೂಕಿನ ದಿವೆಯಲ್ಲಿರುವ ಶ್ರೀ ಆಲ್ಫಾ ಕೆಮಿಕಲ್ಸ್ ಹೆಸರಿನ ಕಾರ್ಖಾನೆಯಲ್ಲಿ ಮೆಫೆಡ್ರೋನ್ ತಯಾರಿಸುತ್ತಿದ್ದ ವಿಷಯವು ಬಹಿರಂಗಗೊಂಡಿತು.
ಅನಂತರ ಎಟಿಎಸ್ ತಂಡವು ಫೆ. 19ರಂದು ಪುಣೆಯಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆಸಿ 4.2 ಕೋಟಿ ರೂ. ಮೌಲ್ಯದ 10.500 ಕೆ.ಜಿ. ಎಂಡಿ ಡ್ರಗ್ಸ್ ಮತ್ತು ಕಚ್ಚಾ ರಾಸಾಯನಿಕಗಳನ್ನು ಜಪ್ತಿ ಮಾಡಿತು. ವಶಪಡಿಸಿಕೊಳ್ಳಲಾಗಿರುವ ಕಚ್ಚಾ ರಾಸಾಯನಿಕಗಳಿಂದ 200 ಕೆ.ಜಿ. ಎಂಡಿ (80 ಕೋಟಿ ರೂ.) ತಯಾರಿಸಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ. ಸುಮಾರು 1.2 ಕೋಟಿ ರೂ. ಮೌಲ್ಯದ ಎಂಡಿ ತಯಾರಿಕಾ ಘಟಕವನ್ನು ಕೂಡ ಜಪ್ತಿ ಮಾಡಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಎಟಿಎಸ್‌ನ ಮುಖ್ಯ ಎಡಿಜಿಪಿ ದೇವನ್ ಭಾರ್ತಿ, ಐಜಿಪಿ ಜಯಂತ್ ನಾಯ್ಕ ನವಾರೆ, ಡಿಸಿಪಿ ವಿಕ್ರಂ ದೇಶಮಾಣೆ, ಡಾ| ವಿನಾಯಕ್ ರಾಥೋಡ್ ಮತ್ತು ಎಸಿಪಿ ಶ್ರೀಪಾದ್ ಕಾಳೆ ಅವರ ಮಾರ್ಗದರ್ಶನದ ಅಡಿಯಲ್ಲಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.