Advertisement

Day-Night Test: ಪ್ರೈಮ್‌ ಮಿನಿಸ್ಟರ್ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ

01:11 AM Dec 02, 2024 | Team Udayavani |

ಕ್ಯಾನ್‌ಬೆರಾ: ಮಳೆಯಿಂದಾಗಿ ಒಂದು ದಿನಕ್ಕೆ ಹಾಗೂ 46 ಓವರ್‌ಗಳಿಗೆ ಸೀಮಿತಗೊಂಡ ಹಗಲು-ರಾತ್ರಿ ಅಭ್ಯಾಸ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ಶನಿವಾರದ ಮೊದಲ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಆದರೆ ರವಿವಾರದ ಹವಾಮಾನ ಆಟಕ್ಕೆ ಸಹಕರಿಸಿತು. ಹೀಗಾಗಿ ತಲಾ 46 ಓವರ್‌ಗಳ ಪಂದ್ಯವನ್ನು ಆಡಲಾಯಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪ್ರೈಮ್‌ ಮಿನಿಸ್ಟರ್ ಇಲೆವೆನ್‌ 43.2 ಓವರ್‌ಗಳಲ್ಲಿ 240ಕ್ಕೆ ಆಲೌಟಾದರೆ, ಭಾರತ 42.5 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿತು. ಆದರೆ ಪೂರ್ತಿ 46 ಓವರ್‌ಗಳನ್ನಾಡಿ 5 ವಿಕೆಟಿಗೆ 257 ರನ್‌ ಗಳಿಸಿತು.

ಹಗಲು-ರಾತ್ರಿಯಾಗಿ ನಡೆಯುವ ಅಡಿಲೇಡ್‌ ಟೆಸ್ಟ್‌ ಪಂದ್ಯಕ್ಕಾಗಿ ಈ ಅಭ್ಯಾಸ ಪಂದ್ಯವನ್ನೂ ಡೇ-ನೈಟ್‌ ಆಗಿಯೇ ಆಯೋಜಿಸಲಾಗಿತ್ತು. ಭಾರತದ ಬ್ಯಾಟರ್, ಬೌಲರ್‌ಗಳಿಗೆ ಸೀಮಿತ ಅವಧಿಯಲ್ಲಿ ಉತ್ತಮ ಅಭ್ಯಾಸ ಲಭಿಸಿತು. ಬಹುತೇಕ ಆಟಗಾರರು ಇಲ್ಲಿ ಯಶಸ್ಸು ಕಂಡರು.

ರಾಣಾ ಬೌಲಿಂಗ್‌ ಮಿಂಚು
ಬೌಲಿಂಗ್‌ನಲ್ಲಿ ಹರ್ಷಿತ್‌ ರಾಣಾ 6 ಎಸೆತಗಳ ಅಂತರದಲ್ಲಿ 4 ವಿಕೆಟ್‌ ಉಡಾಯಿಸಿ ಮಿಂಚಿದರು. ರಾಣಾ ಸಾಧನೆ 44ಕ್ಕೆ 4. ಆಕಾಶ್‌ ದೀಪ್‌ 58ಕ್ಕೆ 2 ವಿಕೆಟ್‌ ಕೆಡವಿದರು. ಸಿರಾಜ್‌, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್‌, ಜಡೇಜ ಒಂದೊಂದು ವಿಕೆಟ್‌ ಸಂಪಾದಿಸಿದರು. ಶುಭಮನ್‌ ಗಿಲ್‌ ಸರ್ವಾಧಿಕ 50 ರನ್‌ ಬಾರಿಸಿ ತಮ್ಮ ಫಿಟ್‌ನೆಸ್‌ ಸಾಬೀತುಪಡಿಸಿದರು.

ಜೈಸ್ವಾಲ್‌ 45, ನಿತೀಶ್‌ ರೆಡ್ಡಿ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ 42, ರಾಹುಲ್‌ ಮತ್ತು ಜಡೇಜ ತಲಾ 27 ರನ್‌ ಹೊಡೆದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ರೋಹಿತ್‌ ಶರ್ಮ (3) ಯಶಸ್ಸು ಕಾಣಲಿಲ್ಲ. ಸಫ‌ìರಾಜ್‌ ಖಾನ್‌ (1) ಕೂಡ ಬೇಗನೇ ಔಟಾದರು. ಕೊಹ್ಲಿ, ಅಶ್ವಿ‌ನ್‌, ಬುಮ್ರಾ, ಪಂತ್‌ ಆಡಲಿಲ್ಲ.

Advertisement

ಕೋನ್‌ಸ್ಟಾಸ್‌ ಶತಕ
ಆತಿಥೇಯ ತಂಡದ ಆರಂಭಕಾರ ಸ್ಯಾಮ್‌ ಕೋನ್‌ಸ್ಟಾಸ್‌ 107 ರನ್‌ ಬಾರಿಸಿ ಆಯ್ಕೆ ಮಂಡಳಿಯ ಕದ ತಟ್ಟಿದರು (97 ಎಸೆತ, 14 ಬೌಂಡರಿ, 1 ಸಿಕ್ಸರ್‌). ಹ್ಯಾನೊ ಜೇಕಬ್ಸ್ 61, ಜಾಕ್‌ ಕ್ಲೇಟನ್‌ 40 ರನ್‌ ಕೊಡುಗೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next