ಧಾರವಾಡ:ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಆಗದಷ್ಟು ದಾಖಲೆ ಪ್ರಮಾಣದಲ್ಲಿ 154 ಮಿಮೀ ಮಳೆ ಆಗಿದ್ದು, ಒಂದೇ ದಿನ ಜಿಲ್ಲೆಯ ಗ್ರಾಮವೊಂದರಲ್ಲಿ ದಾಖಲೆಯ 121 ಮಿಮೀ ಮಳೆಯಾಗಿದೆ. ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತ ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯಾಚರಣೆಗೆ ಇಳಿದಿದೆ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದಲ್ಲಿ ಗುರುವಾರ ಬೆಳಗ್ಗೆ ಅಧಿಕಾರಿಗಳ ತುರ್ತು ಸಭೆ ಕೈಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಂದರೆಯಲ್ಲಿ ಸಿಲುಕಬಹುದಾದ ಜನರ ನೆರವಿಗಾಗಿ ಎಲ್ಲ ತಾಲೂಕು, ಪಾಲಿಕೆ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ನೋಡಲ್ ಅಧಿಕಾರಿಗಳೊಂದಿಗೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಚಿಕ್ಕ ಚಿಕ್ಕ ತಂಡಗಳನ್ನು ರಚಿಸಿ ಗಂಭೀರ ಪರಿಸ್ಥಿತಿಗಳನ್ನು ನಿರ್ವಹಿಸಲು ಸನ್ನದ್ಧಗೊಳಿಸಲಾಗಿದೆ. ಅವರು ರಕ್ಷಣಾ ಕಾರ್ಯದಲ್ಲಿ ಈಗಾಗಲೇ ತೊಡಗಿದ್ದಾರೆ ಎಂದು ತಿಳಿಸಿದರು.
ಪರಿಸ್ಥಿತಿ ನಿಭಾಯಿಸಲು ಪ್ರತಿ ತಾಲೂಕಿನ ತಹಶೀಲ್ದಾರ್‌ರೊಂದಿಗೆ ಜಿಲ್ಲೆಯ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿದೆ. ನೋಡಲ್ ಅಧಿಕಾರಿ ಅದೇ ತಾಲೂಕಿನಲ್ಲಿ ಸ್ಥಾನಿಕವಾಗಿದ್ದು, ತಹಶೀಲ್ದಾರ್‌ಗೆ ನೆರವಾಗುವುದರೊಂದಿಗೆ ಪ್ರತಿ ಗಂಟೆಗೊಮ್ಮೆ ಜಿಲ್ಲಾಡಳಿತಕ್ಕೆ ತಮ್ಮ ತಾಲೂಕಿನ ಕುರಿತು ಮಾಹಿತಿ ನೀಡುತ್ತಿದ್ದಾರೆ. ಇದರಿಂದಾಗಿ ತೊಂದರೆಗೀಡಾದ ಸಂತ್ರಸ್ತರಿಗೆ ತಕ್ಷಣ ಸ್ಪಂದಿಸಲು ಸಹಾಯವಾಗಿದೆ ಎಂದರು.
ಅಳ್ನಾವರ ತಾಲೂಕಿನಲ್ಲಿಯೇ ಹೆಚ್ಚು: ಮಲೆನಾಡಿನ ಸೆರಗು ಅಳ್ನಾವರ ತಾಲೂಕಿನಲ್ಲಿಯೇ ಹೆಚ್ಚು ಮಳೆಯಾಗುತ್ತಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಹೂಲಿಕೆರೆ, ಡೌಗಿ ನಾಲಾ ಸಂಪೂರ್ಣವಾಗಿ ತುಂಬಿರುವುದರಿಂದ ಮತ್ತು ಖಾನಾಪುರ ಭಾಗದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ಹೆಚ್ಚು ನೀರು ಅಳ್ನಾವರ ಭಾಗಕ್ಕೆ ಬಂದು ತೊಂದರೆ ಆಗಿದೆ. ನಾಲಾ ಒಡೆಯದಂತೆ ಮುಂಜಾಗೃತಾ ಕ್ರಮ ತೆಗೆದುಕೊಂಡಿದ್ದು, ಹೆಚ್ಚುವರಿ ನೀರು ಕೋಡಿ ಮೂಲಕ ಹೊರ ಹೋಗುವಂತೆ ಮಾಡಲಾಗಿದೆ. ಸ್ಥಳದಲ್ಲಿ ಅಧಿಕಾರಿಗಳು ಖುದ್ದು ಹಾಜರಿದ್ದು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಈಗಾಗಲೇ ಅಳ್ನಾವರ ಪಟ್ಟಣದ ಉಮಾಭವನದಲ್ಲಿ ಪರಿಹಾರ ಕೇಂದ್ರ ಆರಂಭಿಸಿ ಸುಮಾರು 300 ಜನರಿಗೆ ಊಟ-ವಸತಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಬುಧವಾರದಿಂದ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಮತ್ತೂಂದು ಪರಿಹಾರ ಕೇಂದ್ರ ಆರಂಭಿಸಲಾಗಿದೆ ಎಂದರು.
500 ಜನರಿಗೆ ಸಾರಿಗೆ ವ್ಯವಸ್ಥೆ: ಬೆಳಗಾವಿ ಹಾಗೂ ಅಳ್ನಾವರ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿರುವುದರಿಂದ ಬೆಂಗಳೂರಿನಿಂದ ಆಗಮಿಸಿರುವ ರೈಲುಗಳು ಬೆಳಗಾವಿ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ರೈಲು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿಂತಿದ್ದರಿಂದ ಸುಮಾರು 500 ಜನ ಪ್ರಯಾಣಿಕರಿಗೆ ಸಾರಿಗೆ ಕಲ್ಪಿಸಲು ರೈಲ್ವೆ ಇಲಾಖೆ ಕೋರಿತ್ತು. ಅದರಂತೆ ವಾಕರಸಾ ಸಂಸ್ಥೆಯ ಸುಮಾರು 50 ಬಸ್‌ಗಳನ್ನು ಒದಗಿಸಿ, ಬೆಳಗಾವಿ ಹಾಗೂ ಇತರ ಭಾಗಗಳಿಗೆ ಪ್ರಯಾಣಿಕರು ಸುರಕ್ಷಿತವಾಗಿ ತಲುಪಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ದೀಪಾ ಚೋಳನ್ ತಿಳಿಸಿದರು.
ಪರಿಹಾರ ವಿತರಣೆ: ಕುಂದಗೋಳ ತಾಲೂಕಿನ ಬಾರದ್ವಾಡ ಗ್ರಾಮದ ಕಾಶಯ್ಯ ಮಹಾದೇವಯ್ಯ ಮತ್ತು ಗಾಮನಗಟ್ಟಿ ಗ್ರಾಮದ ಚನ್ನವ್ವ ರಾಮಪ್ಪ ವಾಲೀಕಾರ ಮೃತರಾಗಿದ್ದಾರೆ. ಬುಧವಾರ ರಾತ್ರಿ ಅಳ್ನಾವರ ತಾಲೂಕಿನ ಮುರಕಟ್ಟಿಯಲ್ಲಿ ನೀರಿಗೆ ಸಿಲುಕಿದ್ದ ವ್ಯಕ್ತಿಯೊಬ್ಬ ಗುರುವಾರ ಬೆಳಗಿನ ಜಾವ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಜನ, ಜಾನುವಾರು ಜೀವಹಾನಿಯಾದಲ್ಲಿ 24 ಗಂಟೆಯಲ್ಲಿ ಪರಿಹಾರ ವಿತರಿಸಲಾಗುವುದು. ಪರಿಹಾರ ಹಣವನ್ನು ಆಯಾ ತಹಶೀಲ್ದಾರ್‌ರು ತಕ್ಷಣ ವಿತರಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಂಚಾರಿ ಆರೋಗ್ಯ ತಂಡ ರಚನೆ: ಅತೀ ಮಳೆಯಿಂದಾಗಿ ನೀರು ಸಂಬಂಧಿತ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತೆಯಾಗಿ ಸಂಚಾರಿ ಆರೋಗ್ಯ ತಂಡಗಳನ್ನು ರಚಿಸಿ ಕ್ಷೇತ್ರಗಳಿಗೆ ಕಳುಹಿಸಲಾಗಿದೆ. ಪ್ರತಿದಿನ ಪರಿಹಾರ ಕೇಂದ್ರಗಳಲ್ಲಿ ಗ್ರಾಮದ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ಔಷಧಗಳನ್ನು ವಿತರಿಸಲಾಗುತ್ತಿದೆ. ಅವಶ್ಯವಿದ್ದಲ್ಲಿ ಖಾಸಗಿ ವೈದ್ಯರ ಸೇವೆಯನ್ನೂ ಬಳಸಿಕೊಳ್ಳಲಾಗುವುದು ಎಂದು ದೀಪಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮತ್ತು ಪ್ರೊಬೆಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್ ಇದ್ದರು.
ಮಳೆಯಿಂದಾಗಿ ವಿವಿಧೆಡೆ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಕೆಲ ಮಾರ್ಗದ ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿದೆ. ನರಗುಂದ ತಾಲೂಕು ಕೊಣ್ಣೂರು ಬಳಿ ಸೇತುವೆ ಮೇಲೆ ನೀರು ನಿಂತು ಬಾಗಲಕೋಟೆ ಹಾಗೂ ವಿಜಯಪುರ ಮಾರ್ಗದ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನಾಂಹೊಂಗಲ ಬಳಿ ರಸ್ತೆ ಕಡಿತಗೊಂಡು ಸವದತ್ತಿ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್ ಸಂಚಾರ ರದ್ದಾಗಿವೆ. ಕಲಘಟಗಿ-ಮುಂಡಗೋಡ ಮಾರ್ಗದ ಬೆಲವಂತರ ಹಾಗೂ ಕಲಘಟಗಿ-ತಬಕದ ಹೊನ್ನಳ್ಳಿ ಮಾರ್ಗ ಕಡಿತಗೊಂದೆ. ಶಿರಸಿ ಹಾಗೂ ಯಲ್ಲಾಪುರದ ವರೆಗೆ ಮಾತ್ರ ಬಸ್‌ಗಳ ಸಂಚಾರ ಆರಂಭವಾಗಿದ್ದು, ಮುಂದೆ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿಲ್ಲ.
ಸಹಾಯವಾಣಿಗೆ ಕರೆಮಾಡಿ: ಅಳ್ನಾವರ ತಾಲೂಕು-ಮೊ:8050530637, ಜಿಲ್ಲೆಯ ಗ್ರಾಮೀಣ ಭಾಗದವರು-ಮೊ:9480230962 ಮತ್ತು ಟೋಲ್ಫ್ರಿ 1077 ಹಾಗೂ ಅವಳಿ ನಗರದ ಜನರು ಪಾಲಿಕೆಯಲ್ಲಿ ಸ್ಥಾಪಿಸಿರುವ 0836-2213888, 2213869, 2213886, 2213998 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ದೂರುಗಳಿಗೆ ತಕ್ಷಣ ಸ್ಪಂದಿಸಲು ಮೂರು ಜನ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ.
ಅನುದಾನ ಕೊರತೆ ಇಲ್ಲ: ನೆರೆ ಪರಿಹಾರ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಯಾವುದೇ ಆರ್ಥಿಕ ಕೊರತೆ ಇಲ್ಲ. ಮುಂಚಿತವಾಗಿಯೇ ತಹಶೀಲ್ದಾರ್‌ಗೆ 50 ಲಕ್ಷ ಅನುದಾನ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು. ಸ್ಥಳೀಯವಾಗಿ ಅಗತ್ಯ ಮುಂಜಾಗೃತೆ ವಹಿಸಿ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಲು ತಹಶೀಲ್ದಾರ್‌ಗೆ ನಿರ್ದೇಶನ ನೀಡಲಾಗಿದೆ.
ಆಹಾರ ಪೊಟ್ಟಣಕ್ಕೆ ಕ್ರಮ: ನೆರೆಯಲ್ಲಿ ಸಿಲುಕಿರುವ ಸಾರ್ವಜನಿಕರಿಗೆ ಆಹಾರ ಪೂರೈಕೆಗೆ ತೊಂದರೆಯಾದರೆ ನಿಭಾಯಿಸಲು ಹೆಲಿಕಾಪ್ಟರ್ ಮೂಲಕ ನೀರು, ಆಹಾರ, ಪೊಟ್ಟಣಗಳನ್ನು ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಂಎಫ್‌ನಿಂದ ಪರಿಹಾರ ಕೇಂದ್ರದಲ್ಲಿನ ಗರ್ಭಿಣಿಯರಿಗೆ, ಮಕ್ಕಳಿಗೆ, ವಯೋವೃದ್ಧರಿಗೆ ಹಾಗೂ ನೆರೆಪೀಡಿತ ಜನರಿಗೆ ಹಾಲು, ಪೌಷ್ಠಿಕ ಆಹಾರ ಮತ್ತು ಬಿಸ್ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನೆರೆ ಸಂತ್ರಸ್ತರಿಗೆ ನೈಋತ್ಯ ರೈಲ್ವೆ ನೆರವು: ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬೆಂಗಳೂರು-ಬೆಳಗಾವಿ ತತ್ಕಾಲ್ ಸ್ಪೇಷಲ್ ರೈಲಿನ ಮೂಲಕ ಹುಬ್ಬಳ್ಳಿಗೆ ಬಂದ ಸಚಿವರು ಹೆಲ್ಪ್ ಡೆಸ್ಕ್ ಹಾಗೂ ಪರಿಹಾರ ಸಾಮಗ್ರಿ ಕುರಿತು ಮಾಹಿತಿ ಪಡೆದುಕೊಂಡರು. ಬೆಳಗಾವಿಗೆ ಹೋಗುವ ರೈಲು ಪ್ರಯಾಣಿಕರಿಗಾಗಿ 14 ಬಸ್‌ಗಳ ವ್ಯವಸ್ಥೆ ಮಾಡಿದರು.
ಮಾರ್ಗದುದ್ದಕ್ಕೂ ಮಳೆಯಿಂದ ರೈಲ್ವೆ ಆಸ್ತಿಗೆ ಆದ ಹಾನಿ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡರು. ಸಚಿವರೊಂದಿಗೆ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್, ಹಿರಿಯ ಅಧಿಕಾರಿಗಳಿದ್ದರು. ನೈಋತ್ಯ ರೈಲ್ವೆ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ 3 ಜನಸಾಧಾರಣ ರೈಲುಗಳ ಸಂಚಾರ ಒದಗಿಸಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ 28 ಬಸ್‌ಗಳನ್ನು ವ್ಯವಸ್ಥೆ ಮಾಡಲಾಯಿತು. ಹುಬ್ಬಳ್ಳಿ ವಿಭಾಗ ಪ್ರವಾಹ ಪೀಡಿತರಿಗೆ ನೀಡಲು ಬಟ್ಟೆ, ಆಹಾರ ಸಾಮಗ್ರಿ ಹಾಗೂ ಕುಡಿಯುವ ನೀರಿನ ಬಾಟಲ್ಗಳನ್ನು ಸಂಗ್ರಹಿಸುತ್ತಿದೆ. ಈವರೆಗೆ 1.1 ಲಕ್ಷ ರೂ. ಸಾಮಗ್ರಿ ವಿತರಿಸಲಾಗಿದೆ. ಗೋಕಾಕ, ರಾಯಬಾಗ, ಬೆಳಗಾವಿಯಲ್ಲಿ ಪ್ರವಾಹ ಪೀಡಿತರಿಗಾಗಿ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ಕಳೆದೆರಡು ದಿನಗಳಲ್ಲಿ 1050 ಜನರಿಗೆ ಊಟ ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಬೆಣ್ಣಿಹಳ್ಳ, ತುಪ್ಪರಿಹಳ್ಳಗಳಿಂದ ಉಂಟಾಗಬಹುದಾದ ನೆರೆಹಾವಳಿ ಬಗ್ಗೆ ಜಿಲ್ಲಾಡಳಿತ ಮುಂಜಾಗೃತವಾಗಿ ಸುರಕ್ಷತಾ ಕ್ರಮ ತೆಗೆದುಕೊಂಡಿದೆ. ಯಾವುದೇ ಜನ, ಜಾನುವಾರು ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಬಾಧಿತರಾಗಿರುವ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ಕೇಂದ್ರ ಆರಂಭಿಸಲಾಗಿದೆ. ಬೆಣ್ಣಿಹಳ್ಳದಿಂದ 15 ಗ್ರಾಮಗಳು ಮತ್ತು ತುಪ್ಪರಿಹಳ್ಳದಿಂದ ಎರಡು ಹಳ್ಳಿಗಳು ಬಾಧಿತವಾಗುವ ಸಂಭವವಿದ್ದು, ಸುರಕ್ಷತಾ ಕ್ರಮ ಜರುಗಿಸಲಾಗಿದೆ.
•ದೀಪಾ ಚೋಳನ್, ಜಿಲ್ಲಾಧಿಕಾರಿ