ಚಿಕ್ಕಬಳ್ಳಾಪುರ: ಸ್ವ ಸಹಾಯ ಸಂಘಗಳ ಎಲ್ಲ ಮಹಿಳೆಯರು ಸರ್ಕಾರದ ವಿವಿಧ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ನಗರಸಭೆ ಅಧ್ಯಕ್ಷ ಡಿ. ಎಸ್.ಆನಂದರೆಡ್ಡಿ(ಬಾಬು) ಸಲಹೆ ನೀಡಿದರು.
ನಗರದ ಪಾಡುರಂಗ ಸ್ವಾಮಿ ದೇಗುಲದಲ್ಲಿ ನಗರಸಭೆಯಿಂದ 26ನೇ ವಾರ್ಡ್‌ನ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆಯೋಜಿಸಿದ್ದ ಡೇ -ನಲ್ಮ್ ಯೋಜನೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಮಹಿಳೆಯರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಸ್ವಾಭಿ ಮಾನದ ಜೀವನ ರೂಪಿಸಿಕೊಳ್ಳಬೇಕು ಎಂದರು.
ಸ್ವ ಸಹಾಯ ಸಂಘದ ಮಹಿಳೆಯರಿಗೆ ಸರ್ಕಾರ ದಿಂದ ಸಾಲ ಸೌಲಭ್ಯ ಪಡೆಯುವ ಬಗ್ಗೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳೆವಣಿಗೆಯಾಗಿದ್ದು, ಮಹಿಳೆಯರು ಸರ್ಕಾರ ದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆಯಬೇಕು. ಸಾಲ ಪಡೆದ ಮೇಲೆ ಮರುಪಾವತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸ್ವ ಸಹಾಯ ಸಂಘದ ಮಹಿಳೆಯರಿಗೆ ಆಹಾರ ಪದಾರ್ಥ ತಯಾರಿಸುವ ಉತ್ಪನ್ನಗಳಿಗೆ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ತಲಾ ಒಬ್ಬರಿಗೆ 40 ಸಾವಿರ ರೂ, ನಂತೆ 10 ಗುಂಪಿಗೆ 4 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ ಎಂದರು. 26ನೇ ವಾರ್ಡ್‌ನ ನಗರಸಭೆ ಸದಸ್ಯೆ ಭಾರತಿದೇವಿ ಮಾತನಾಡಿ, ಸ್ವಸಹಾಯ ಸಂಘದವರಿಗೆ ಏನೆಲ್ಲಾ ಸಾಲ ಸೌಲಭ್ಯವಿದೆ, ಹೇಗೆ ಪಡೆಯುವುದು, ಸಾಲ ಮರು ಪಾವತಿಗೆ ಸಂಬಂಧ ನಗರದ ವಾರ್ಡ್ 26ರ ಸ್ವ ಸಹಾಯ ಸಂಘ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಡೇ ನಲ್ಮ್ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಡೇ ನಲ್ಮ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವೆಂಕಟಚಲಪತಿ ಮಾತನಾಡಿದರು. ವಾರ್ಡ್‌ನ ರಾಮಕೃಷ್ಣ, ಸಿ.ಜೆ.ಸಂತೋಷ್ ಕುಮಾರ್, ಮುರಳಿ, ಶಕೀಲ್ ಅಹ್ಮದ್, ಯುನಸ್, ರಾಘವೇಂದ್ರ, ಕೊಂಡಪ್ಪ, ಪಾಂಡು, ಮುಖೇಶ್ ಜೈನ್, ಸ್ವ ಸಹಾಯ ಸಂಘದ ಪ್ರತಿನಿಧಿಗಳಾದ ಭಾಗ್ಯಮ್ಮ, ಆಶಾ, ಗೀತಾ ಹಾಜಿರ, ಗುಲ್ತಾಜ್ ಇತರರಿದ್ದರು.