Advertisement

Udupi ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೇ ಕೇರ್‌ ಕೇಂದ್ರ ಪ್ರಾರಂಭ

12:10 AM Sep 16, 2023 | Team Udayavani |

ಉಡುಪಿ: ಜಿಲ್ಲೆಯ ಎಂಡೋಸಲ್ಫಾನ್‌ ಸಂತ್ರಸ್ತರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 19 ಲಕ್ಷ ರೂ. ವೆಚ್ಚದಲ್ಲಿ 6 ಹಾಸಿಗೆಗಳ ವಾರ್ಡ್‌ಗಳನ್ನು ನಿರ್ಮಿಸುವ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದು, ಪ್ರಾಯೋಗಿಕ ಯೋಜನೆಯಾಗಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೇ ಕೇರ್‌ ಸೆಂಟರ್‌ ಆರಂಭಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.

Advertisement

ಶಿರೂರು, ಕೊಲ್ಲೂರು, ಕಿರಿಮಂಜೇಶ್ವರ, ಸಿದ್ದಾಪುರ, ಬಿದ್ಕಲ್‌ಕಟ್ಟೆ, ಕೆದೂರು, ಆಲೂರು, ಹಿರಿಯಡಕ, ಕೊಕ್ಕರ್ಣೆ, ಇರ್ವತ್ತೂರು ಮತ್ತು ಮಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಆರ್‌ಪಿ ಯೋಜನೆಯಡಿ 6 ಹಾಸಿಗೆಯ ವಾರ್ಡ್‌ಗಳನ್ನು ತಲಾ 19 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಆದರೆ, ವೈದ್ಯಕೀಯ ಪರಿಕರ ಹಾಗೂ ಸಿಬಂದಿ ಸೇವೆ ಇನ್ನೂ ಒದಗಿಸದೇ ಇರುವುದರಿಂದ ಕಾರ್ಯಾರಂಭವಾಗಿಲ್ಲ. ಯಾವ ರೀತಿಯ ಬೆಡ್‌ ಆವಶ್ಯಕತೆಯಿದೆ ಮತ್ತು ಸಿಬಂದಿ ನೇಮಕ ಇತ್ಯಾದಿಗಳ ಚರ್ಚೆ ನಡೆಯುತ್ತಿದೆ.
ಡೇ ಕೇರ್‌ ಕೇಂದ್ರ: ಎಂಡೋ ಸಲ್ಫಾನ್‌ ಸಂತ್ರಸ್ತರಿಗೆ ಪುನರ್‌ವಸತಿ ಕೇಂದ್ರದ ರೀತಿಯಲ್ಲಿ ದಾಖಲಾತಿ ಮಾಡಿಕೊಂಡು ಅವರ ಆರೈಕೆ ಮಾಡುವುದಕ್ಕಿಂತ ಡೇ ಕೇರ್‌ ಸೆಂಟರ್‌ ಮಾದರಿಯಲ್ಲಿ ಬೆಳಗ್ಗೆ ಬಂದು ಪೂರ್ಣ ಚಿಕಿತ್ಸೆ ಪಡೆದು, ಸಂಜೆ ವಾಪಸ್‌ ಹೋಗಬಹುದಾಗಿದೆ.

ಕಿರಿಮಂಜೇಶ್ವರ ಹಾಗೂ ಹಿರಿಯಡಕದಲ್ಲಿ ಪೈಲೆಟ್‌ ಯೋಜನೆಯಾಗಿ ಫಿಜಿಯೋಥೆರಪಿ ಯುನಿಟ್‌ ಆಗಿ ರೂಪಿಸುವ ಹಂತದಲ್ಲಿದ್ದೇವೆ. ಎಲ್ಲಿ ಪ್ರಕರಣ ಜಾಸ್ತಿ ಇದೆಯೋ ಆ ಭಾಗಕ್ಕೆ ಮೊದಲ ಆದ್ಯತೆಯಲ್ಲಿ ಡೇ ಕೇರ್‌ ಕೇಂದ್ರ ಆರಂಭಿಸಲಾಗುವುದು. ಮುಂದೆ ಎಲ್ಲ ಕಡೆಗೂ ವಿಸ್ತರಿಸಲಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಚ್‌. ನಾಗಭೂಷಣ ಉಡುಪ ಮಾಹಿತಿ ನೀಡಿದರು.

ಮನೆಗೆ ಹೋಗಿ ಚಿಕಿತ್ಸೆ
ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ನಿಂದ ಶಾಶ್ವತವಾಗಿ ಹಾಸಿಗೆ ಹಿಡಿದಿರುವ 44 ಮಂದಿಗೆ ಅವರ ಮನೆಗೆ ಹೋಗಿ ಚಿಕಿತ್ಸೆ/ ಫಿಜಿಯೋಥೆರಪಿ ನೀಡುವ ವ್ಯವಸ್ಥೆಯಿದೆ. ಆದರೆ, ಶೇ.25ರಿಂದ ಶೇ.59ರಷ್ಟು ಅಂಗವಿಕಲತೆ/ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುವವರಿಗೆ ಡೇ ಕೇರ್‌ ಸೆಂಟರ್‌ ತೆರೆಯಲಾಗುತ್ತಿದೆ.

Advertisement

ಪುನರ್ವಸತಿ
ಕೇಂದ್ರ ಆರಂಭವಾಗಿಲ್ಲ
ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಲು ನಾಡದಲ್ಲಿ ಐದು ಎಕ್ರೆ ಜಾಗ ಮೀಸಲಿಡಲಾಗಿತ್ತು. 11 ಕೋ.ರೂ. ಪ್ರಾಜೆಕ್ಟ್ ಕೂಡ ನೀಡಲಾಗಿತ್ತು. ಆದರೆ, ಅದು ಸರಕಾರದ ಅನುಮೋದನೆ ಸಿಗದೆ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಸ್ಪಂದನೆ ನೀಡಲು ಎರಡು ಅಥವಾ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದರಂತೆ ಡೇ ಕೇರ್‌ ಸೆಂಟರ್‌ ತರುವ ಚಿಂತನೆಯಾಗಿದೆ.

ಅಂಕಿ ಅಂಶ
ಜಿಲ್ಲೆಯಲ್ಲಿಎಂಡೋಸಲ್ಫಾನ್‌ ಬಾಧಿತರಾಗಿ ಶೇ.25ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವ 193 ಮಂದಿ, ಶೇ.59ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವ 405 ಮಂದಿ, ಶೇ.60ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ 1,123 ಮಂದಿ ಸೇರಿದಂತೆ ಒಟ್ಟು 1,721 ಮಂದಿ ಸಂತ್ರಸ್ತರು ಜಿಲ್ಲೆಯಲ್ಲಿದ್ದಾರೆ. ಶೇ.25ಕ್ಕಿಂತ ಮೇಲ್ಪಟ್ಟ ಅಂಗವಿಕಲತೆ ಹೊಂದಿರುವವರು ಸರಕಾರದಿಂದ ಮಾಸಾಶನ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next