ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಸಿಬ್ಬಂದಿಗಳ ಮಕ್ಕಳ ಪಾಲನೆಗೆ ಕಚೇರಿ ಆವರಣದಲ್ಲಿ ಒಂದು ಮಕ್ಕಳ ಡೇ ಕೇರ್ ಕೇಂದ್ರ ಸ್ಥಾಪಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದ್ದು, ರಾಜ್ಯ ಪೊಲೀಸ್ ಇಲಾಖೆ ಈ ಉಪಕ್ರಮವು ಮಹಿಳಾ ಅಧಿಕಾರಿಗಳು-ಸಿಬ್ಬಂದಿ ತಮ್ಮ ಕರ್ತವ್ಯಗಳಿಗೆ ಹಾಜರಾದಾಗ ತಮ್ಮ ಮಕ್ಕಳ ಪಾಲನೆಗಾಗಿ ಈ ಕೇಂದ್ರ ನೆರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್, ಲೋಕೋಪಯೋಗಿ ಇಲಾಖೆ ಮತ್ತು ಬೆಂಗಳೂರು ನಗರ ಪೊಲೀಸ್ ಜಂಟಿಯಾಗಿ ಈ ಡೇ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಈ ಸೆಂಟರ್‌ನಲ್ಲಿ ಆಟಿಕೆಗಳು, ಪುಸ್ತಕಗಳು, ಮಲಗುವ ಮಂಚಗಳು, ಕುರ್ಚಿಗಳು, ಶುದ್ಧೀಕರಿಸಿದ ನೀರು, ಶೌಚಾಲಯಗಳು ಮತ್ತು ಆಹಾರ ತಯಾರಿಕೆಯ ಸೌಕರ್ಯಗಳು ಮತ್ತು ಮಕ್ಕಳ ಆರೈಕೆಗಾಗಿ ಬೇಕಾದ ಒಂದಿಬ್ಬರು ಸಿಬ್ಬಂದಿಯನ್ನು ನೇಮಿಸಲಾಗಿದೆ. ಸದ್ಯ ಈ ಕೇಂದ್ರದಲ್ಲಿ 10-15 ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದೆ. ಈ ಡೇ-ಕೇರ್ ಸೌಲಭ್ಯವನ್ನು ಇತರ ಪೊಲೀಸ್ ಠಾಣೆಗಳಿಗೂ ವಿಸ್ತರಿಸು ವ ಯೋಜನೆ ಇದೆಯಾದರೂ, ನಗರದಾದ್ಯಂತ ಎಲ್ಲಾ ಠಾಣೆಗಳಲ್ಲಿ ಇದನ್ನು ಜಾರಿಗೊಳಿಸುವುದು ಕಷ್ಟ. ಇದೇ ಮಾದರಿಯಲ್ಲಿ ವಿಧಾನಸೌಧದಲ್ಲಿ ಮಕ್ಕಳ ಡೇ ಕೇರ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 12ರಂದು ವಿಶ್ವ ತಾಯಂದಿರ ದಿನದ ಪ್ರಯುಕ್ತ ಬೆಂಗಳೂರು ಪೊಲೀಸ್ ಘಟಕ ವಿಡಿಯೋ ಮೂಲಕ ಮಾಹಿತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿ ಕೊಂಡಿದೆ. ಅದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿ ತಮ್ಮ ಕರ್ತವ್ಯದ ಜತೆಗೆ ಮಕ್ಕಳನ್ನು ನೋಡಿಕೊಳ್ಳುವಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಮಕ್ಕಳ ಡೇ ಕೇರ್ ಸೆಂಟರ್ ನಿಂದ ತಮಗೆ ಹೇಗೆ ಸಹಾಯವಾಗಿದೆ ಎಂದು ವಿವರಿಸಿದ್ದಾರೆ.
ವಿವಿಐಪಿ ಸೆಕ್ಯುರಿಟಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ಶೀಲಾ ಈ ಬಗ್ಗೆ ಮಾತನಾಡಿದ್ದು, ‘ತನಗೆ ಪುಟ್ಟ ಮಗುವಿದ್ದು, ಮಗುವಿನೊಂದಿಗೆ ಕರ್ತವ್ಯಕ್ಕೆ ಬರುವಾಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಮಗುವನ್ನು ಮನೆಯಲ್ಲಿ ಬಿಡಲು ಸಾಧ್ಯವಿಲ್ಲ. ಏಕೆಂದರೆ ಆರೈಕೆ ಮಾಡಲು ಯಾರೂ ಇಲ್ಲ ಮತ್ತು ಮಗುವನ್ನು ಕೆಲಸದ ಸ್ಥಳಕ್ಕೆ ಕರೆತರುವುದು ಸಹ ಕಷ್ಟಕರವಾಗಿತ್ತು. ಇದೀಗ ಮಕ್ಕಳ ಡೇ ಕೇರ್ ಸೆಂಟರ್‌ನಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿಕೊಂಡಿದ್ದಾರೆ.
6 ತಿಂಗಳ ಹಿಂದೆ, ತನ್ನ ಮಗುವನ್ನು ಡೇ ಕೇರ್‌ನಲ್ಲಿ ಬಿಟ್ಟು ಕೆಲಸಕ್ಕೆ ಬರುತ್ತಿದೆ. ಅದಕ್ಕೆ ಮಾಸಿಕ 3 ಸಾವಿರ ರೂ. ಕೊಡಬೇಕಾಗಿತ್ತು. ಆದರೆ, ಮಗು ದೂರ ಇರುತ್ತಿದ್ದ ಬಗ್ಗೆ ಚಿಂತೆ ಇತ್ತು. ಇದೀಗ ಈ ನೋವು ದೂರವಾಗಿದೆ
–ಸುಮಾ, ಮಹಿಳಾ ಹೆಡ್‌ಕಾನ್‌ಸ್ಟೇಬಲ್