Advertisement

ಆರಾಮದಿಂದ ದಿನ ಕಳೆದ ಅಭ್ಯರ್ಥಿಗಳು

11:22 AM May 14, 2018 | |

ಕಲಬುರಗಿ: ಕಳೆದೊಂದು ತಿಂಗಳಿನಿಂದ ಹಗಲಿರಳು ಚುನಾವಣಾ ಪ್ರಚಾರ ಹಾಗೂ ಮತಬೇಟೆಯಲ್ಲಿ ತೊಡಗಿದ್ದ ವಿವಿಧ ಪಕ್ಷಗಳು ಮುಖಂಡರು ಹಾಗೂ ಸ್ಪರ್ಧಾ ಅಭ್ಯರ್ಥಿಗಳು ರವಿವಾರ ದಿನವೀಡಿ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಕಳೆದರು.

Advertisement

ನಿದ್ದೆಗಟ್ಟು ಹಲವು ದಿನಗಳಾಗಿದ್ದರಿಂದ ಹಲವರು ಸಂಪೂರ್ಣ ನಿದ್ದೆ ಮಾಡಿದರೆ, ಹಲವರು ಕುಟುಂಬದರೊಂದಿಗೆ ಕಾಲ ಕಳೆದರು. ಇನ್ನೂ ಹಲವರು ಜನ್ಮ ದಿನಾಚರಣೆ ಹಾಗೂ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಕೆಲವರು
ತಮ್ಮ ನೆಚ್ಚಿನ ದೇವಾಸ್ಥಾನಗಳಿಗೆ ತೆರಳಿ ದರ್ಶನ ದೇವರ ಪಡೆದರು.

ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಖರ್ಗೆ: ರಾಜ್ಯಾದ್ಯಂತ ಸುತ್ತಾಡಿ ಪ್ರಚಾರ ಮಾಡಿದ್ದ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಮತದಾನ ಮರುದಿನವಾದ ರವಿವಾರ ನಗರದ ತಮ್ಮ
ನಿವಾಸದಲ್ಲಿ 50ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು.

ಮಲ್ಲಿಕಾರ್ಜುನ ಖರ್ಗೆ ಅವರು ಪತ್ನಿ ರಾಧಾಬಾಯಿ ಅವರೊಂದಿಗೆ 50ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡರು. ಖರ್ಗೆ ದಂಪತಿಗೆ ಆರತಿ ಬೆಳಗಿ, ಹೂ-ಹಣ್ಣು ನೀಡುವ ಮೂಲಕ ಕುಟುಂಬದ ಸದಸ್ಯರು ಸಡಗರ,
ಸಂಭ್ರಮದಿಂದ ಆಚರಿಸಿದರು. ದಂಪತಿ ಪರಸ್ಪರ ಹೂಮಾಲೆ, ಉಂಗುರ ಮತ್ತು ಸಿಹಿ ವಿನಿಮಯ ಮಾಡಿಕೊಂಡರು. ಎಲ್ಲರೂ ಅಕ್ಷತೆ ಹಾಕಿ ಶುಭ ಕೋರಿದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಶುಭ ಕೋರಿದರು. ಜನ್ಮ ದಿನಾಚರಣೆ: ಅಫಜಲಪುರ ಕ್ಷೇತ್ರದ
ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಮಾಲಿಕಯ್ಯ ವಿ. ಗುತ್ತೇದಾರ ಅವರಿಗೆ ಮೇ 13 ಜನ್ಮ ದಿನ. ರಾಜಕೀಯ ಜಂಜಾಟ ಹಾಗೂ ಚುನಾವಣೆ ಪ್ರಚಾರದ ಒತ್ತಡದಿಂದ ತಿಂಗಳ ಕಾಲ ಕಳೆದಿದ್ದ ಗುತ್ತೇದಾರ ಅವರು ನಗರದ ಗುಬ್ಬಿ ಕಾಲೋನಿಯಲ್ಲಿನ ಅವರ ನಿವಾಸದಲ್ಲಿ ರವಿವಾರ 62ನೇ ಜನ್ಮ ದಿನ ಆಚರಿಸಿಕೊಂಡರು. ಕಳೆದ ವರ್ಷ ಷಷ್ಠಬ್ದಿ ಆಚರಿಸಿಕೊಂಡಿದ್ದ ಗುತ್ತೇದಾರ ಅವರು ರವಿವಾರ ಕುಟುಂಬದವರು-ಅಭಿಮಾನಿಗಳೊಂದಿಗೆ ಜನ್ಮ ದಿನ ಆಚರಿಸಿಕೊಂಡರು.
 
ಜೇವರ್ಗಿ ಮತಕ್ಷೇತ್ರದ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಡಾ| ಅಜಯಸಿಂಗ್‌ ರವಿವಾರ ಬೆಳಗ್ಗೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿದ್ದಾರೆ. ಬೆಳಗ್ಗೆ ಸ್ವಲ್ಪ ತಡವಾಗಿ ಎದ್ದ ಅಜಯಸಿಂಗ್‌ ಆಪ್ತರೊಂದಿಗೆ ಚುನಾವಣೆ ಕುರಿತಾಗಿ ಸಮಾಲೋಚಿಸಿ ಕುಟುಂಬದ ಸದಸ್ಯರೊಂದಿಗೆ ಶಿರಡಿಗೆ ತೆರಳಿದರು. 

Advertisement

ಚುನಾವಣೆ ಮುಗಿಸಿ ಸ್ವಗ್ರಾಮ ನರಿಬೋಳದಲ್ಲಿ ತಂಗಿದ್ದ ಜೇವರ್ಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ಚಿತ್ತಾಪುರ ತಾಲೂಕು ದಂಡಗುಂಡ ಬಸವಣ್ಣ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ತದನಂತರ ಜೇವರ್ಗಿಗೆ ಬಂದು ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣೆ ಕುರಿತಾಗಿ ಚರ್ಚೆ ನಡೆಸಿದರು. 

ಕಲಬುರಗಿ ದಕ್ಷಿಣ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಸವರಾಜ ಡಿಗ್ಗಾವಿ ರವಿವಾರ ಖಣದಾಳದ ತಮ್ಮ ಶ್ರೀಗುರು ವಿದ್ಯಾಪೀಠದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಪ್ರವೇಶಾತಿಗಾಗಿ ವಿದ್ಯಾರ್ಥಿ ಹಾಗೂ ಪಾಲಕರ ಸಂದರ್ಶನ ನಡೆಸಿದರು. 

ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ನೆಲೋಗಿ ಬೆಳಗ್ಗೆ ಮನೆಯಲ್ಲಿ ಹೆಚ್ಚಿನ ಸಮಯ ಕಳೆದು ತದನಂತರ ಸಂಸದ ಖರ್ಗೆ ಅವರ ಮನೆಗೆ ತೆರಳಿ ಮದುವೆ ವಾರ್ಷಿಕೋತ್ಸವ ಸಂಭ್ರಮದ ಕ್ಷಣಗಳಲ್ಲಿ ಪಾಲ್ಗೊಂಡರು. ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬೆಳಗ್ಗೆ ಮನೆಯಲ್ಲಿ ತಂದೆ-ತಾಯಿ ಮದುವೆ
ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ತದನಂತರ ಚಿತ್ತಾಪುರಕ್ಕೆ ತೆರಳಿದರು. 

ಕಲಬುರಗಿ ಉತ್ತರಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ ರವಿವಾರ ಬೆಳಗ್ಗೆ ಮನೆಯರೊಂದಿಗೆ ಕಾಲ ಕಳೆದು ತದನಂತರ ಗೆಳೆಯರೊಂದಿಗೆ ಚರ್ಚೆ ನಡೆಸಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡರು. ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರು ಸೇಡಂ ಕ್ಷೇತ್ರದ ಸ್ವಗ್ರಾಮ ಗ್ರಾಮ ಉಡಗಿಯಲ್ಲಿಯೇ ಕಾಲ ಕಳೆದು ಚುನಾವಣೆ ಕುರಿತು ಸಮಾಲೋಚನೆ ನಡೆಸಿದರು. 

ಉಳಿದಂತೆ ಶಾಸಕ ದತ್ತಾತ್ರೇಯ ಪಾಟೀಲ, ಅಫಜಲಪುರ ಜೆಡಿಎಸ್‌ ಅಭ್ಯರ್ಥಿ ರಾಜುಗೌಡ ಪಾಟೀಲ, ಆಳಂದ ಕ್ಷೇತ್ರದ ಶಾಸಕ ಬಿ.ಆರ್‌. ಪಾಟೀಲ ಹಾಗೂ ಇತರರು ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆದು ಚುನಾವಣೆ ಮತಗಳಿಕೆ ಕುರಿತಾಗಿ ಲೆಕ್ಕಾಚಾರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next