ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟ ಛೋಟಾ ಶಕೀಲ್ ಕಳೆದ ಜನವರಿಯಲ್ಲೇ ಸಾವನ್ನಪ್ಪಿದ್ದಾನೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಗೊಂಡಿದೆ. ಈ ಬಗ್ಗೆ ಮುಂಬಯಿ ಯಲ್ಲಿರುವ ಸಂಬಂಧಿಗೆ ಶಕೀಲ್ ಗ್ಯಾಂಗ್‌ನ ಸದಸ್ಯ ಬಿಲಾಲ್ ಎಂಬಾತ ಕರೆ ಮಾಡಿ ವಿಷಯ ತಿಳಿಸಿದ ದೂರ ವಾಣಿ ಕರೆ ಧ್ವನಿಮುದ್ರಿಕೆ ಬಹಿರಂಗ ಗೊಂಡಿದ್ದು, ಈ ಸುದ್ದಿ ಅಂತರ್ಜಾಲ ದಲ್ಲಿ ಸಾಕಷ್ಟು ಸದ್ದು ಮಾಡಿದೆ.
ಈ ಬಗ್ಗೆ “ದ ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದ್ದು, “ಛೋಟಾ ಶಕೀಲ್ ಸಾವು ಸಂಭವಿಸಿರುವ ಬಗ್ಗೆ ಹಲವು ರೀತಿಯ ಹೇಳಿಕೆಗಳಿವೆ. ಈ ಬಗ್ಗೆ ಖಚಿತಪಡಿಸಲಾಗದು’ ಎಂದು ಭಾರತದ ರಾಷ್ಟ್ರೀಯ ಭದ್ರತಾ ವಿಭಾಗ ಮತ್ತು ಮುಂಬಯಿ ಪೊಲೀಸರು ಮಾಹಿತಿ ನೀಡಿದ್ದಾಗಿ ಹೇಳಿದೆ.
ಶಕೀಲ್ ಹೇಗೆ ಸಾವನ್ನಪ್ಪಿದ್ದಾನೆ ಎಂಬುದಕ್ಕೆ ಎರಡು ಕಥೆಗಳಿವೆ. ಮೂಲಗಳ ಪ್ರಕಾರ ಜನವರಿ 6ರಂದು ಇಸ್ಲಾಮಾಬಾದ್‌ನಲ್ಲಿ ಒಡೆಸ್ಸಾ ಎಂಬ ತನ್ನ ಗ್ಯಾಂಗ್‌ನ ಸದಸ್ಯನನ್ನು ಭೇಟಿ ಮಾಡಲು ಶಕೀಲ್ ತೆರಳಿದ್ದ. ಆಗ ಆತ ನಿಗೆ ಹೃದಯಾಘಾತ ಉಂಟಾಗಿತ್ತು. ತತ್‌ಕ್ಷಣವೇ ಆತನ ಬಾಡಿಗಾರ್ಡ್ ಗಳು ರಾವಲ್ಪಿಂಡಿಯ ಕಂಬೈನ್x ಮೆಡಿಕಲ್ ಹಾಸ್ಪಿಟಲ್‌ಗೆ ವಿಮಾನದ ಮೂಲಕ ಕರೆತಂದರು. ಅಲ್ಲಿಗೆ ತರು ವಾಗಲೇ ಆತ ಸಾವನ್ನಪ್ಪಿದ್ದ ಎಂದು ಹೇಳಲಾಗಿದೆ. ಇನ್ನೊಂದು ಮೂಲದ ಪ್ರಕಾರ ಶಕೀಲ್‌ನನ್ನು ಒಡೆಸ್ಸಾ ಮೂಲಕ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹತ್ಯೆಗೈದಿದೆ. ಯಾಕೆಂದರೆ ಶಕೀಲ್‌ನನ್ನು ಹಿಡಿತದಲ್ಲಿಟ್ಟುಕೊಳ್ಳಲು ಐಎಸ್‌ಐಗೆ ಸಾಧ್ಯವಾಗುತ್ತಿರಲಿಲ್ಲ. ಇವನ ದೇಹವನ್ನು ಎರಡು ದಿನಗಳ ವರೆಗೆ ಇಟ್ಟುಕೊಂಡು, ಅನಂತರ ಸಿ130 ವಿಮಾನದಲ್ಲಿ ಕರಾಚಿಗೆ ತಂದು, ಡಿಫೆನ್ಸ್ ಹೌಸಿಂಗ್ ಅಥಾರಿಟಿ ಶ್ಮಶಾನದಲ್ಲಿ ಗುರುತು ಸಿಗದ ಸ್ಥಳ ದಲ್ಲಿ ಸಮಾಧಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ತತ್‌ಕ್ಷಣವೇ ಶಕೀಲ್‌ನ ಎರಡನೇ ಪತ್ನಿ ಆಯೆಶಾ ಹಾಗೂ ಕುಟುಂಬದ ಇತರರನ್ನು ಡಿಎಚ್‌ಎ ಕಾಲನಿಯ ಮನೆಯಿಂದ ಕರೆದೊಯ್ದು, ಐಎಸ್‌ಐ ಲಾಹೋರ್‌ನಲ್ಲಿ ಸುರಕ್ಷಿತವಾದ ಮನೆಯೊಂದರಲ್ಲಿ ಇರಿಸಿದೆ ಎಂದೂ ಹೇಳಲಾಗಿದೆ.
ಶಕೀಲ್‌ಗೆ ಇಬ್ಬರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಮತ್ತು ಓರ್ವ ಮೊಮ್ಮಗಳು ಇದ್ದಾರೆ.
ಖನ್ನನಾದ ದಾವೂದ್: ದಾವೂದ್ ಸಂಸ್ಕಾರದ ಎಲ್ಲ ಕೆಲಸವೂ ಮುಗಿದ ನಂತರ, ಎರಡು ದಿನ ಬಿಟ್ಟು ದಾವೂದ್‌ಗೆ ಶಕೀಲ್ ಸಾವನ್ನಪ್ಪಿರುವ ವಿಚಾರ ತಿಳಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ದಾವೂದ್ ಖನ್ನ ನಾಗಿದ್ದಾನೆ. ಜನವರಿಯ ಕೊನೆಯ ವಾರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಮಾರ್ಚ್ ನಲ್ಲಿ ಮತ್ತೂಮ್ಮೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿ ದ್ದಾನೆ. ಅಷ್ಟೇ ಅಲ್ಲ, ತನ್ನ ನಂಬಿಕಸ್ಥ ಬಂಟನನ್ನು ಕಳೆದುಕೊಂಡಿದ್ದರಿಂದ ದಾವೂದ್ ಭಾರತಕ್ಕೆ ವಾಪಸಾಗುವ ಚಿಂತನೆ ನಡೆಸಿದ್ದಾನೆ. ಈಗಾಗಲೇ ಶಕೀಲ್‌ನ ಆಪ್ತರಾಗಿದ್ದ ಬಿಲಾಲ್, ಮೊಹಮ್ಮದ್ ರಶಿದ್, ಇಕ್ಬಾಲ್ ಸಲೀಮ್, ಯೂಸುಫ್ ರಾಜಾ ಮತ್ತು ಪರ್ವೇಜ್ ಖ್ವಾಜಾ ದಾವೂದ್‌ನಿಂದ ದೂರವಾಗಿದ್ದಾರೆ ಎನ್ನಲಾಗಿದೆ.
ನಕಲಿ ಶಕೀಲ್ ಜೀವಂತ!
ಶಕೀಲ್ ಸತ್ತಿರುವ ಬಗ್ಗೆ ಕೇವಲ 20 ಜನರಿಗೆ ಮಾತ್ರ ತಿಳಿದಿದೆ ಎನ್ನಲಾಗಿದೆ. ಮೂಲ ಗಳ ಪ್ರಕಾರ ಶಕೀಲ್ ಸತ್ತಿರುವ ವಿಷಯವನ್ನು ಐಎಸ್‌ಐ ಗುಟ್ಟಾಗಿ ಇಡಲು ಬಯಸಿದೆ. ಇದರಿಂದ ಆತನ ಹೆಸರನ್ನು ಬಳಸಿಕೊಂಡು ಭೂಗತ ಜಗತ್ತನ್ನು ನಿಯಂತ್ರಿಸಬಹುದಾಗಿದೆ. ಮೂಲಗಳ ಪ್ರಕಾರ ಶಕೀಲ್ ಇರುವಾಗಲೇ ತನ್ನನ್ನೇ ಹೋಲುವ ಮತ್ತು ತನ್ನ ಧ್ವನಿಯನ್ನೇ ಅನುಕರಿಸುವ ರಹೀಮ್ ಮರ್ಚಂಟ್ ಎಂಬ ವ್ಯಕ್ತಿಯನ್ನು ಇಟ್ಟುಕೊಂಡಿದ್ದ. ಮರ್ಚಂಟ್‌ನನ್ನು ಬಳಸಿ ವ್ಯಾಪಾರಿಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಸುದ್ದಿ ಬಿತ್ತರಿಸುವುದು ಹಾಗೂ ವಹಿವಾಟು ನಡೆಸುವ ಕೆಲಸ ನಡೆಯುತ್ತಿತ್ತು. ಮರ್ಚಂಟ್ ಈ ಕೆಲಸವನ್ನು ಮುಂದುವರಿಸುವ ಸಾಧ್ಯತೆಯಿದೆ. ಏಕೆಂದರೆ ಐಎಸ್‌ಐ ನಡೆಸುವ ಹಲವು ಶಸ್ತ್ರಾಸ್ತ್ರ ವಹಿವಾಟುಗಳಲ್ಲಿ ಶಕೀಲ್ ಮುಖ್ಯಪಾತ್ರ ವಹಿಸಿದ್ದ.