ಹೊಸಪೇಟೆ (ವಿಜಯನಗರ): ವಿಜಯನಗರದ ಗತವೈಭವ ಸಾರುವ ಐತಿಹಾಸಿಕ ಹಂಪಿಯ ಸ್ಮಾರಕಗಳನ್ನು ಪ್ರತಿಬಿಂಬಿಸುವ ಅದ್ದೂರಿ ವೇದಿಕೆ ಯಲ್ಲಿ ಶನಿವಾರ ರಾಜ್ಯದ 31ನೇ ನೂತನ ವಿಜಯ ನಗರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೀಪ ಬೆಳಗುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಹೊಸ ಜಿಲ್ಲೆಗೆ ಚಾಲನೆ ಸಿಗುತ್ತಲೇ, “ಉದಯ ವಾಯಿತು ವಿಜಯನಗರ’ ಎಂಬ ಘೋಷಣೆಗಳು ಅನುರಣಿಸಿದವು. ಇತಿಹಾಸದ ಪುಟಗಳಲ್ಲಿ ದಾಖಲಾದ ಈ ಐತಿಹಾಸಿಕ ಕ್ಷಣಕ್ಕೆ ಮಾಜಿ ಸಿಎಂ ಬಿಎಸ್‌ವೈ, ಸಚಿವರಾದ ಆನಂದ್ ಸಿಂಗ್, ಗೋವಿಂದ ಕಾರಜೋಳ, ಡಾ| ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು ಸಾಕ್ಷಿಯಾದರು.
ವಿಜಯನಗರ ಸಾಮ್ರಾಜ್ಯವನ್ನು ಪ್ರತಿಬಿಂಬಿ ಸುವಂತೆ ವೇದಿಕೆಯಲ್ಲಿ ಸಿದ್ಧಪಡಿಸಿದ್ದ ಹಂಪಿಯ ಐತಿಹಾಸಿಕ ಬಿಷ್ಟಪ್ಪಯ್ಯ ಮಹಾಗೋಪುರ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು. ವೇದಿಕೆಯ ಮುಖ್ಯ ಹಕ್ಕಬುಕ್ಕ ಮಹಾದ್ವಾರದಲ್ಲಿ ಅಶ್ವದಳಗಳು ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಗತಿಸಿದವು. ಹಾಲಿ- ಮಾಜಿ ಮುಖ್ಯಮಂತ್ರಿಗಳು ಜನರತ್ತ ಕೈಬೀಸಿ ಆಗಮಿಸುತ್ತಿದ್ದಂತೆ ಜನರು ಸಂಭ್ರಮಿಸಿದರು.
ಆ ಬಳಿಕ ಪ್ರದರ್ಶಿಸಲಾದ ಸಾಕ್ಷ್ಯಚಿತ್ರದಲ್ಲಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಸಂಬಂ ಧಿಸಿದಂತೆ ಈ ಹಿಂದೆ ಸಚಿವ ಆನಂದ್ ಸಿಂಗ್ ಮಾಡಿರುವ ಭಾಷಣ, ನೀಡಿರುವ ಭರವಸೆಗಳ ವೀಡಿಯೋ ತುಣುಕುಗಳು ಮೂಡಿಬಂದವು. ಇದೇ ವೇಳೆ ಗಾಂಧಿಧೀಜಿ ಮತ್ತು ಶಾಸ್ತ್ರಿ ಜಯಂತಿ ನಿಮಿತ್ತ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಇದನ್ನೂ ಓದಿ:ಕಾಂಗ್ರೆಸ್ ಸೋಲಿಸಲು ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ: ಸಿದ್ದು
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸಂಸದರು ಮತ್ತಿತರರು ಇದ್ದರು. ಸಿಎಂ ಆದೇಶದಂತೆ ಪುಸ್ತಕ ನೀಡುವ ಮೂಲಕ ಗಣ್ಯರನ್ನು ಸ್ವಾಗತಿಸಿದ್ದು ಗಮನ ಸೆಳೆಯಿತು. ಇದಕ್ಕೆ ಮುನ್ನ ಹೊಸಪೇಟೆಯಲ್ಲಿ ನಡೆದ ಭವ್ಯ ಮೆರವಣಿಗೆ ಕರುನಾಡ ಕಲಾವೈಭವವನ್ನು ಮೆರೆಯಿಸಿತು.