ಲಂಡನ್: ಯಾರ್ಕಶೈರ್ ತಂಡದ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಮತ್ತು ಲ್ಯಾಂಕಾಶೈರ್ ವೇಗಿ ಶಕೀಬ್ ಮಹಮೂದ್ ಅವರನ್ನು ಭಾರತದೆದುರಿನ 3ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಡಾಮ್ ಸಿಬ್ಲಿ ಮತ್ತು ಜಾಕ್ ಕ್ರಾಲಿ ತಂಡದಿಂದ ಬೇರ್ಪಟ್ಟಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಇಂಗ್ಲೆಂಡ್ ತಂಡದಲ್ಲಿ ಈ ಪರಿವರ್ತನೆ ಮಾಡಲಾಗಿದೆ. ಆದರೆ ಲಾರ್ಡ್ಸ್‌ನಲ್ಲಿ ಮಿಂಚದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ ಸ್ಥಾನ ಉಳಿಸಿಕೊಂಡಿದ್ದಾರೆ.
33 ವರ್ಷದ ಡೇವಿಡ್ ಮಲಾನ್ ನಂ.1 ಟಿ20 ಬ್ಯಾಟ್ಸ್‌ಮನ್ ಆಗಿದ್ದರೂ 2018ರ ಬಳಿಕ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅಂದು ಕೊನೆಯ ಸಲ ಪ್ರವಾಸಿ ಭಾರತದ ವಿರುದ್ಧವೇ ಆಡಿದ್ದರು. ಕಳಪೆ ಫಾರ್ಮ್ನಿಂದಾಗಿ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಬಳಿಕ ಅವರನ್ನು ಕೈಬಿಡಲಾಗಿತ್ತು.
ಮುಂಬರುವ ಆ್ಯಶಸ್ ಸರಣಿಯನ್ನೂ ಗಮನದಲ್ಲಿರಿಸಿಕೊಂಡು ಮಲಾನ್‌ಗೆ ಅವಕಾಶ ನೀಡಿರುವ ಸಾಧ್ಯತೆ ಇದೆ. ಕಳೆದ ಆ್ಯಶಸ್ ಸರಣಿಯಲ್ಲಿ ಅವರು 42.55ರ ಸರಾಸರಿ ದಾಖಲಿಸಿದ್ದರು. ಪರ್ತ್‌ನಲ್ಲಿ ಶತಕವನ್ನೂ ಬಾರಿಸಿದ್ದರು.
3ನೇ ಟೆಸ್ಟ್ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಆ. 25ರಂದು ಆರಂಭವಾಗಲಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆಯಲ್ಲಿದೆ.
ಇಂಗ್ಲೆಂಡ್ ತಂಡ :
ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲಾನ್, ಜಾಸ್ ಬಟ್ಲರ್, ಬೇರ್‌ಸ್ಟೊ, ಡ್ಯಾನ್ ಲಾರೆನ್ಸ್, ಓಲೀ ಪೋಪ್, ಮೊಯಿನ್ ಅಲಿ, ಸ್ಯಾಮ್ ಕರನ್, ಶಕೀಬ್ ಮಹಮೂದ್, ಕ್ರೆಗ್ ಓವರ್ಟನ್, ರಾಬಿನ್ಸನ್, ಮಾರ್ಕ್ ವುಡ್, ಆ್ಯಂಡರ್ಸನ್.