ಸ್ಟಾಕ್‌ಹೋಮ್ (ಸ್ವೀಡನ್): ಸ್ವೀಡನ್ ಎದುರಿನ ವಿಶ್ವ ಗ್ರೂಪ್ 1 ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯ ಮೊದಲ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋಲನುಭವಿಸಿದ ಭಾರತ 0-2 ಹಿನ್ನಡೆಗೆ ಸಿಲುಕಿದೆ.
ಮೊದಲ ಸಿಂಗಲ್ಸ್‌ನಲ್ಲಿ ಡಬಲ್ಸ್ ಸ್ಪೆಷಲಿಸ್ಟ್ ಎನ್. ಶ್ರೀರಾಮ್ ಬಾಲಾಜಿ ಅವರನ್ನು ಸ್ವೀಡನ್‌ನ ನಂ.1 ಆಟಗಾರ ಎಲಿಯಾಸ್ ವೈಮರ್ 6-4, 6-2 ಅಂತರದಿಂದ ಪರಾಭವಗೊಳಿಸಿರು. ಸುಮಿತ್ ನಾಗಲ್, ಯೂಕಿ ಭಾಂಬ್ರಿ ಗೈರಲ್ಲಿ ಬಾಲಾಜಿ ಅನಿವಾರ್ಯವಾಗಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಬೇಕಾಯಿತು.
ದ್ವಿತೀಯ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್ ಅವರನ್ನು ಲಿಯೋ ಬೋರ್ಗ್ 6-3, 6-3 ಅಂತರದಿಂದ ಹಿಮ್ಮೆಟ್ಟಿಸಿದರು. ತನಗಿಂತ ಮೇಲಿನ ಕ್ರಮಾಂಕದ ರಾಮ್‌ಕುಮಾರ್ ಅವರನ್ನು ಮಣಿಸಿದ ಬೋರ್ಗ್, ವಿಶ್ವ ರ್‍ಯಾಂಕಿಂಗ್‌ನಲ್ಲಿ 603ರಷ್ಟು ಕೆಳಗಿನ ಸ್ಥಾನದಲ್ಲಿದ್ದಾರೆ. ಇವರು ಲೆಜೆಂಡ್ರಿ ಟೆನಿಸಿಗ ಬ್ಯೋರ್ನ್ ಬೋರ್ಗ್ ಅವರ ಮಗ. ಈ ಪಂದ್ಯ ಕೇವಲ 58 ನಿಮಿಷಗಳಲ್ಲಿ ಮುಗಿಯಿತು.
ಭಾರತವಿನ್ನು ರವಿವಾರದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ. ರವಿವಾರ ಡಬಲ್ಸ್ ಮತ್ತು ರಿವರ್ಸ್ ಸಿಂಗಲ್ಸ್ ಪಂದ್ಯಗಳನ್ನು ಆಡಲಾಗುವುದು. “ಮಾಡು-ಮಡಿ’ ಡಬಲ್ಸ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್-ಎನ್. ಶ್ರೀರಾಮ್ ಬಾಲಾಜಿ ಕಣಕ್ಕಿಳಿಯಬಹುದು. ಅಥವಾ ಈ ಕಾಂಬಿನೇಶನ್ ಬದಲಾಗಲೂಬಹುದು.
ಭಾರತ ಡೇವಿಸ್ ಕಪ್ ಚರಿತ್ರೆಯಲ್ಲಿ ಕೇವಲ 2 ಸಲ ಮಾತ್ರ 0-2 ಹಿನ್ನಡೆಯ ಬಳಿಕ ಮೇಲುಗೈ ಸಾಧಿಸಿದೆ. 2010ರಲ್ಲಿ ಬ್ರಝಿಲ್ ವಿರುದ್ಧ, 2018ರಲ್ಲಿ ಚೀನ ವಿರುದ್ಧ ಈ ಸಾಧನೆಗೈದಿತ್ತು.