Advertisement

ಡೇವಿಸ್‌ ಕಪ್‌ನಲ್ಲಿ ಬೋಪಣ್ಣ-ಪೇಸ್‌ ಜೋಡಿ!

06:55 AM Mar 12, 2018 | Team Udayavani |

ನವದೆಹಲಿ: ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಆಟಗಾರರು ಮಧ್ಯ ಪ್ರವೇಶಿಸುವಂತಿಲ್ಲ ಎಂಬ ಖಡಕ್‌ ಸಂದೇಶ ರವಾನಿಸಿರುವ ಅಖೀಲ ಭಾರತ ಟೆನಿಸ್‌ ಸಂಸ್ಥೆ, ಡೇವಿಸ್‌ ಕಪ್‌ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಅವರ ಜೋಡಿಯಾಗಿ ಹಿಂದಿನ ಖ್ಯಾತ ಡಬಲ್ಸ್‌ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು ಆಯ್ಕೆ ಮಾಡಿದೆ.

Advertisement

ಇವರಿಬ್ಬರು ಚೀನಾ ವಿರುದ್ಧ ಮುಂದಿನ ತಿಂಗಳು ತಿಯಾಂಜಿನ್‌ನಲ್ಲಿ ನಡೆಯುವ ಡೇವಿಸ್‌ ಕಪ್‌ ಏಷ್ಯಾ-ಒಶಿಯಾನಿಯ ಗ್ರೂಪ್‌ ಒಂದರ ಕೂಟದಲ್ಲಿ ಜತೆಗೂಡಿ ಆಡಬೇಕಿದೆ. 5 ಸದಸ್ಯರ ಆಯ್ಕೆ ಸಮಿತಿ ಯೂಕಿ ಭಾಂಬ್ರಿ, ರಾಮ್‌ಕುಮಾರ್‌ ರಾಮನಾಥನ್‌, ಸುಮಿತ್‌ ನಗಾಲ್‌, ರೋಹನ್‌ ಬೋಪಣ್ಣ, ಲಿಯಾಂಡರ್‌ ಪೇಸ್‌ ಅವರನ್ನು ಭಾರತದ ಡೇವಿಸ್‌ ಕಪ್‌ ತಂಡಕ್ಕೆ ಸೇರಿಸಿದೆ. ದಿವಿಜ್‌ ಶರಣ್‌ ಮೀಸಲು ಆಟಗಾರರಾಗಿದ್ದಾರೆ. ಕೆನಡಾದೆದುರು ನಡೆದಿದ್ದ ವರ್ಲ್ಡ್ಕಪ್‌ ಪ್ಲೇ-ಆಫ್ನಲ್ಲಿ ಗಮನಾರ್ಹ ಪ್ರದರ್ಶನ ನೀಡದ ಪುರವ್‌ ರಾಜ ಅವರನ್ನು ಕೈಬಿಡಲಾಗಿದೆ.

ಎಐಟಿಎ ಮಾಹಿತಿಯೊಂದರ ಪ್ರಕಾರ, ಪಂದ್ಯವಾಡದ ನಾಯಕ ಮಹೇಶ್‌ ಭೂಪತಿ ಆಯ್ಕೆ ಸಮಿತಿಯ ಮುಖ್ಯಸ್ಥರಿಗೆ ಪತ್ರ ಬರೆದು ಚೀನ ವಿರುದ್ಧ ನಡೆಯಲಿರುವ ಡೇವೀಸ್‌ ಕಪ್‌ ಡಬಲ್ಸ್‌ನಲ್ಲಿ ಪೇಸ್‌ ಅವರನ್ನು ಆಡಿಸಬಾರದೆಂದು ಸೂಚಿಸಿದ್ದರು ಎಂದು ಸ್ವತಃ ಆಯ್ಕೆ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೇಸ್‌ ಜತೆ ಆಡಲು ಸಿದ್ಧರಿದ್ದೀರಾ?
ಡೇವಿಸ್‌ಕಪ್‌ ಡಬಲ್ಸ್‌ಗೆ ಪೇಸ್‌-ಬೋಪಣ್ಣ ಜೋಡಿಯನ್ನು ಆಯ್ಕೆ ಮಾಡುವ ಮೂಲಕ ಆಟಗಾರರ ಆಯ್ಕೆ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಭೂಪತಿ ಅವರತ್ತ ಖಡಕ್‌ ಸಂದೇಶ ರವಾನಿಸಿದೆ. ಹಾಗೆಯೇ ತಿಯಾಂಜಿನ್‌ ಟೂರ್ನಿಯಲ್ಲಿ ಪೇಸ್‌ಗೆ ಜತೆಯಾಗಲು ಇಷ್ಟವಿದೆಯೇ, ಇಲ್ಲವೇ ಎಂಬುದನ್ನು ಕೂಡಲೇ ತಿಳಿಸಬೇಕೆಂದು ಬೋಪಣ್ಣ ಅವರಿಗೆ ಸೂಚಿಸಿದೆ. ವೈಯಕ್ತಿಕ ಕಾರಣದಿಂದಾಗಿ ಬಹಳ ಹಿಂದಿನಿಂದಲೂ ಭೂಪತಿ ಮತ್ತು ಬೋಪಣ್ಣ  ಅವರು ಪೇಸ್‌ ಜತೆ ಉತ್ತಮ ಸಂಬಂಧ ಹೊಂದಿಲ್ಲ. ಆದರೆ ಮಹೇಶ್‌ ಭೂಪತಿ ಮತ್ತು ಪೇಸ್‌ ನಡುವೆ ಮುನಿಸು ಮೂಡುವ ಮುನ್ನ ಪೇಸ್‌-ಭೂಪತಿ ಜೋಡಿ ಭಾರತ ಪರ ಗ್ರ್ಯಾನ್‌ ಸ್ಲಾಮ್‌ ಗೆದ್ದು ವಿಶ್ವ ಖ್ಯಾತಿ ಗಳಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next