Advertisement

ನೂರ್‌ ಸುಲ್ತಾನ್‌ನಲ್ಲಿ ಡೇವಿಸ್‌ ಕಪ್‌ ಸೆಣಸಾಟ

09:54 AM Nov 20, 2019 | sudhir |

ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ ನಡುವಣ ಮುಂಬರುವ ಡೇವಿಸ್‌ ಕಪ್‌ ಹೋರಾಟವು ತಟಸ್ಥ ತಾಣವಾದ ಕಜಾಕ್‌ಸ್ಥಾನದ ರಾಜಧಾನಿ ನೂರ್‌ ಸುಲ್ತಾನ್‌ನಲ್ಲಿ ನಡೆಯಲಿದೆ ಎಂದು ಪ್ರಕಟಿಸಿದೆ.

Advertisement

ತಟಸ್ಥ ತಾಣಕ್ಕೆ ಸ್ಥಳಾಂತರಿಸಬೇಕೆಂಬ ಐಟಿಎಫ್ ಡೇವಿಸ್‌ ಕಪ್‌ ಸಮಿತಿಯ ನಿರ್ಧಾರವನ್ನು ಪರಿಶೀಲಿಸಬೇಕೆಂದು ಪಾಕಿಸ್ಥಾನ ಟೆನಿಸ್‌ ಫೆಡರೇಶನ್‌ (ಪಿಟಿಎಫ್) ಮೇಲ್ಮನವಿ ಸಲ್ಲಿಸಿತ್ತು. ಒಂದು ವೇಳೆ ಭಾರತೀಯ ಪ್ರವಾಸಿಗರು ಯಾವುದೇ ಭದ್ರತಾ ಭಯವಿಲ್ಲದೇ ಪಾಕಿಸ್ಥಾನಕ್ಕೆ ಭೇಟಿ ನೀಡಬಹುದಾದರೆ ಭಾರತೀಯ ಟೆನಿಸ್‌ ತಂಡಕ್ಕೆ ಇಸ್ಲಾಮಾಬಾದ್‌ನಲ್ಲಿ ಯಾಕೆ ಪಂದ್ಯ ಆಡಲು ಸಾಧ್ಯವಿಲ್ಲವೆಂದು ಪಿಟಿಎಫ್ ವಾದಿಸಿತ್ತು. ಆದರೆ ವಿಶ್ವ ಮಂಡಳಿಯ ಸ್ವತಂತ್ರ ಸಮಿತಿ ಪಿಟಿಎಫ್ ಮನವಿಯನ್ನು ನ. 18ರಂದು ತಿರಸ್ಕರಿಸಿತ್ತು.

ಡೇವಿಸ್‌ ಕಪ್‌ ನಿಯಮದಂತೆ ತಟಸ್ಥ ತಾಣವನ್ನು ಆಯ್ಕೆ ಮಾಡಬಾರದೆಂಬ ಪಿಟಿಎಫ್ ಮನವಿಯನ್ನು ಕೂಡ ಸಮಿತಿ ತಳ್ಳಿಹಾಕಿದೆ. ಬದಲಾಗಿ ತಟಸ್ಥ ತಾಣವಾದ ಕಜಾಕ್‌ಸ್ಥಾನದ ನೂರ್‌ ಸುಲ್ತಾನ್‌ (ಹಿಂದೆ ಅಸ್ತಾನಾ)ನಲ್ಲಿ ಡೇವಿಸ್‌ ಕಪ್‌ ಹೋರಾಟವು ನ. 29 ಮತ್ತು 30ರಂದು ನಡೆಯಲಿದೆ ಎಂದು ಪ್ರಕಟಿಸಿದೆ. ಹೊರಗಡೆ ಭಾರೀ ಚಳಿಯ ವಾತಾವರಣವಿರುವ ಕಾರಣ ಪಂದ್ಯಗಳು ಒಳಾಂಗಣ ಅಂಗಣದಲ್ಲಿ ನಡೆಯಲಿವೆ.

ಆಟಗಾರರಿಗೆ ಪ್ರಯೋಜನ
ಒಳಾಂಗಣದಲ್ಲಿ ಆಡುವ ಕಾರಣ ನಮ್ಮ ಆಟಗಾರರಿಗೆ ಪ್ರಯೋಜನವಾಗಲಿದೆ. ನಮ್ಮ ಆಟಗಾರರಿಗೆ ಇದರಿಂದ ಲಾಭವಾಗಲಿದೆ. ಇದರರ್ಥ ನಮ್ಮ ಆಟಗಾರರು ಹುಲ್ಲುಹಾಸು ಅಂಗಣದಲ್ಲಿ ಚೆನ್ನಾಗಿ ಆಡುವುದಿಲ್ಲ ಎಂದಲ್ಲ. ಆದರೆ ಹಾರ್ಡ್‌ ಕೋರ್ಟ್‌ ಅಂಗಣದಲ್ಲಿ ಆಟಗಾರರು ಆರಾಮವಾಗಿ ಆಡಬಲ್ಲರು. ಹವಾಮಾನ ಪರಿಸ್ಥಿತಿ ಕಠಿನವಾಗಿದೆ. ನಾವು ಒಳಾಂಗಣದಲ್ಲಿ ಆಡಲಿದ್ದರೂ ಚಳಿಯ ವಾತಾವರಣ ನಮ್ಮ ದೇಹಕ್ಕೆ ತೊಂದರೆ ನೀಡುತ್ತದೆ ಎಂದು ಭಾರತೀಯ ತಂಡದ ಕೋಚ್‌ ಜೀಶನ್‌ ಅಲಿ ಹೇಳಿದ್ದಾರೆ.

ಪರಿಪೂರ್ಣ ತಂಡ: ಇಸ್ಲಾಮಾಬಾದ್‌ನಲ್ಲಿ ಪ್ರಯಾಣಿಸಲು ನಿರಾಕರಿಸಿದ ಭಾರತೀಯ ಅಗ್ರ ಆಟಗಾರರೆಲ್ಲ ತಟಸ್ಥ ತಾಣದಲ್ಲಿ ಆಡಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಈ ಹೋರಾಟಕ್ಕಾಗಿ ಪರಿಪೂರ್ಣ ತಂಡವನ್ನು ಪ್ರಕಟಿಸಿದೆ. ಸಮಿತ್‌ ನಗಲ್‌ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ಅವರು ಸಿಂಗಲ್ಸ್‌ ನಲ್ಲಿ ಆಡಲಿದ್ದರೆ ಲಿಯಾಂಡರ್‌ ಪೇಸ್‌ ಮತ್ತು ಜೀವನ್‌ ನೆಡುಂಚಿಜಿಯಾನ್‌ ಡಬಲ್ಸ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಭುಜದ ಗಾಯದಿಂದಾಗಿ ಅಗ್ರ ಕ್ರಮಾಂಕದ ಡಬಲ್ಸ್‌ ಆಟಗಾರ ರೋಹನ್‌ ಬೋಪಣ್ಣ ಸೋಮವಾರ ಡೇವಿಸ್‌ ಕಪ್‌ನಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು.

Advertisement

ಪಾಕಿಸ್ಥಾನ ತಂಡವನ್ನು ಗಮನಿಸಿದರೆ ಭಾರತವೇ ಬಲಿಷ್ಠ ತಂಡವಾಗಿ ಕಾಣುತ್ತಿದೆ. ಪಾಕಿಸ್ಥಾನವನ್ನು ಎದುರಿಸಲು ಏನೂ ಕಷ್ಟವಾಗಲಿಕ್ಕಿಲ್ಲ. ಆದರೆ ಡೇವಿಸ್‌ ಕಪ್‌ನಲ್ಲಿ ಏನು ಬೇಕಾದರೂ ನಡೆಯಬಹುದು. ಹಾಗಾಗಿ ಪಾಕ್‌ ಆಟಗಾರರನ್ನು ಹಗುರವಾಗಿ ಕಾಣಲು ಸಾಧ್ಯವಿಲ್ಲ ಎಂದು ಜೀಶನ್‌ ತಿಳಿಸಿದರು.

ಹಿಂದೆ ಸರಿಯುವೆ: ಕುರೇಶಿ
ಒಂದು ವೇಳೆ ಹೋರಾಟದ ತಾಣವನ್ನು ಸ್ಥಳಾಂತರಿಸಿದರೆ ಕೂಟದಿಂದ ಹಿಂದೆ ಸರಿಯುವುದಾಗಿ ಪಾಕಿಸ್ಥಾನದ ಪ್ರಮುಖ ಆಟಗಾರ ಐಸಮ್‌ ಉಲ್‌ ಹಕ್‌ ಕುರೇಶಿ ಬೆದರಿಕೆ ಹಾಕಿದ್ದಾರೆ. ಇದರಿಂದ ಪಾಕಿಸ್ಥಾನ ತಂಡ ಇನ್ನಷ್ಟು ದುರ್ಬಲಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next