Advertisement

Davis Cup:ಆಸ್ಟ್ರೇಲಿಯ ಪರಾಭವ;47 ವರ್ಷ ಬಳಿಕ ಇಟಲಿಗೆ ಕಿರೀಟ

11:53 PM Nov 27, 2023 | Team Udayavani |

ಮಲಾಗ (ಸ್ಪೇನ್‌): ಹೆಚ್ಚು ಕಡಿಮೆ ಅರ್ಧ ಶತಮಾನದ ಬಳಿಕ ಇಟಲಿ “ಡೇವಿಸ್‌ ಕಪ್‌’ ಟೆನಿಸ್‌ ಚಾಂಪಿಯನ್‌ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ಇಟಲಿ ಆಸ್ಟ್ರೇಲಿಯವನ್ನು 2-0 ಅಂತರ ದಿಂದ ಪರಾಭವಗೊಳಿಸಿತು.

Advertisement

ಜಾನಿಕ್‌ ಸಿನ್ನರ್‌ ಇಟಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ದ್ವಿತೀಯ ಸಿಂಗಲ್ಸ್‌ನಲ್ಲಿ ಅವರು ಆಸ್ಟ್ರೇಲಿಯದ ನೆಚ್ಚಿನ ಆಟಗಾರ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ 6-3, 6-0 ಅಂತರದ ಜಯ ಸಾಧಿಸಿ ಇಟಲಿಯನ್ನು ಪಟ್ಟಕ್ಕೇರಿಸಿದರು. ಇದರೊಂದಿಗೆ ಈ ವಾರದ ಸ್ಪರ್ಧೆ ಯಲ್ಲಿ ಸಿನ್ನರ್‌ 5-0 ಗೆಲುವಿನ ದಾಖಲೆ ಕಾಯ್ದುಕೊಂಡಂತಾಯಿತು. ಮೊದಲ ಸಿಂಗಲ್ಸ್‌ನಲ್ಲಿ ಮ್ಯಾಟಿಯೊ ಅರ್ನಾಲ್ಡಿ 7-5, 2-6, 6-4 ಅಂತರ ದಿಂದ ಅಲೆಕ್ಸಿ ಪಾಪಿರ್ನ್ ವಿರುದ್ಧ ಜಯ ಸಾಧಿಸಿದ್ದರು.

ಇಟಲಿ 1976ರಲ್ಲಿ ಕೊನೆಯ ಸಲ ಡೇವಿಸ್‌ ಕಪ್‌ ಚಾಂಪಿಯನ್‌ ಆಗಿತ್ತು. ಅನಂತರ 4 ಸಲ ಫೈನಲ್‌ನಲ್ಲಿ ಎಡವಿತ್ತು. ಇದರಲ್ಲಿ 3 ಸೋಲು ಆಸ್ಟ್ರೇಲಿಯ ವಿರುದ್ಧವೇ ಎದುರಾಗಿತ್ತು. ಇದೀಗ 47 ವರ್ಷಗಳ ಬಳಿಕ ಆಸ್ಟ್ರೇಲಿಯವನ್ನೇ ಮಣಿಸಿ ಪ್ರಶಸ್ತಿ ಜಯಿಸಿದೆ.

“ನಾವೆಲ್ಲ ಯುವ ಆಟಗಾರರು. ನಮ್ಮ ಜೀವಮಾನದಲ್ಲಿ ಇನ್ನೊಂದು ಸಲ ಡೇವಿಸ್‌ ಕಪ್‌ ಗೆಲ್ಲಬೇಕೆಂಬ ಬಯಕೆ ಜೋರಿದೆ. ಆದರೆ ಈ ಅನುಭವ ಸ್ಮರಣೀಯ. ಒಂದು ಸಲವಾದರೂ ಗೆದ್ದ ಸಂತೃಪ್ತಿ ನಮ್ಮದು’ ಎಂಬುದಾಗಿ ಜಾನಿಕ್‌ ಸಿನ್ನರ್‌ ಹೇಳಿದರು. ಅವರು ಸೆಪ್ಟಂಬರ್‌ನಿಂದ 9 ಮಂದಿ ಟಾಪ್‌-10 ಆಟಗಾರರನ್ನು ಸೋಲಿಸಿದ ಸಾಧನೆಗೈದಿದ್ದಾರೆ.

25 ವರ್ಷ ಬಳಿಕ ಫೈನಲ್‌
ಸೆಮಿಫೈನಲ್‌ನಲ್ಲಿ ಬಲಿಷ್ಠ ಸರ್ಬಿಯಾಗೆ 2-1 ಅಂತರದ ಸೋಲುಣಿಸಿದ ಇಟಲಿ ಬರೋಬ್ಬರಿ 25 ವರ್ಷಗಳ ಬಳಿಕ ಡೇವಿಸ್‌ ಕಪ್‌ ಫೈನಲ್‌ಗೆ ಲಗ್ಗೆ ಇರಿಸಿತ್ತು.

Advertisement

ಸೆಮಿಫೈನಲ್‌ನಲ್ಲೂ ಜಾನಿಕ್‌ ಸಿನ್ನರ್‌ ಇಟಲಿ ಗೆಲುವಿನ ಹೀರೋ ಎನಿಸಿ ದರು. ಸಿಂಗಲ್ಸ್‌ನಲ್ಲಿ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಜೊಕೋವಿಕ್‌ಗೆ 6-2, 2-6, 7-5 ಅಂತರದ ಸೋಲುಣಿಸಿ ಮೆರೆದಿದ್ದರು. ಪ್ರಸಕ್ತ ಸೀಸನ್‌ನಲ್ಲಿ, ಡೇವಿಸ್‌ ಕಪ್‌ ಇತಿಹಾಸದಲ್ಲಿ 200 ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯದ್ದಾಗಿತ್ತು. ಈ ಸಾಧನೆಗೈದ ಇನ್ನೊಂದು ತಂಡವೆಂದರೆ ಅಮೆರಿಕ.

Advertisement

Udayavani is now on Telegram. Click here to join our channel and stay updated with the latest news.

Next