Advertisement

ಡೇವಿಡ್‌ ವಿಲ್ಲಿ ಬೌಲಿಂಗ್‌ ದಾಳಿಗೆ ಐರ್ಲೆಂಡ್‌ ಗಲಿಬಿಲಿ

03:31 AM Aug 01, 2020 | Hari Prasad |

ಸೌತಾಂಪ್ಟನ್: ವೇಗಿ ಡೇವಿಡ್‌ ವಿಲ್ಲಿ ತಮ್ಮ ಏಕದಿನ ಪುನರಾಗಮನವನ್ನು ಭರ್ಜರಿಯಾಗಿ ಸಾರಿದ್ದಾರೆ.

Advertisement

ಐರ್ಲೆಂಡ್‌ ಎದುರಿನ ಮೊದಲ ಏಕದಿನ ಮುಖಾಮುಖಿಯಲ್ಲಿ 5 ವಿಕೆಟ್‌ ಹಾರಿಸಿದ ಅವರು ಇಂಗ್ಲೆಂಡಿಗೆ 6 ವಿಕೆಟ್‌ಗಳ ಸುಲಭ ಗೆಲುವು ತಂದಿತ್ತು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

ಗುರುವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್‌ ಸೂಪರ್‌ ಲೀಗ್‌ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ 44.4 ಓವರ್‌ಗಳಲ್ಲಿ 172 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು.

ವಿಲ್ಲಿ ಸಾಧನೆ 30ಕ್ಕೆ 5 ವಿಕೆಟ್‌. ಜೋಫ್ರ ಆರ್ಚರ್‌ಗಾಗಿ ಕಳೆದ ವರ್ಷದ ವಿಶ್ವಕಪ್‌ ಪಂದ್ಯಾವಳಿಯಿಂದ ಡೇವಿಡ್‌ ವಿಲ್ಲಿ ಅವರನ್ನು ಕೈಬಿಡಲಾಗಿತ್ತು.

ಜವಾಬಿತ್ತ ಇಂಗ್ಲೆಂಡ್‌ 27.5 ಓವರ್‌ಗಳಲ್ಲಿ 4 ವಿಕೆಟಿಗೆ 174 ರನ್‌ ಬಾರಿಸಿ ‘ರಾಯಲ್‌ ಲಂಡನ್‌ ಸಿರೀಸ್‌’ನಲ್ಲಿ 1-0 ಮುನ್ನಡೆ ಸಾಧಿಸಿತು. ಇದು ವಿಶ್ವ ಚಾಂಪಿಯನ್‌ ಕಿರೀಟ ಏರಿಸಿಕೊಂಡ ಬಳಿಕ ಇಂಗ್ಲೆಂಡ್‌ ತವರಲ್ಲಿ ಆಡಿದ ಮೊದಲ ಏಕದಿನ ಪಂದ್ಯವಾಗಿದೆ. ಹಾಗೆಯೇ 2016ರ ಬಳಿಕ ಈ ಅಂಗಳದಲ್ಲಿ ಇಂಗ್ಲೆಂಡ್‌ ಸಾಧಿಸಿದ ಸತತ 6ನೇ ಗೆಲುವಾಗಿದೆ.

Advertisement

28 ರನ್ನಿಗೆ ಬಿತ್ತು 5 ವಿಕೆಟ್‌

ವಿಲ್ಲಿ ದಾಳಿಗೆ ವಿಲವಿಲನೆ ಒದ್ದಾಡಿದ ಐರಿಷ್‌ ಪಡೆ 28 ರನ್‌ ಮಾಡುವಷ್ಟರಲ್ಲಿ ಅರ್ಧದಷ್ಟು ಮಂದಿಯನ್ನು ಕಳೆದುಕೊಂಡಿತು. ಆದರೆ ಕರ್ಟಿಸ್‌ ಕ್ಯಾಂಫ‌ರ್‌ ಮತ್ತು ಆ್ಯಂಡಿ ಮೆಕ್‌ಬ್ರೈನ್‌ 8ನೇ ವಿಕೆಟ್‌ ಜತೆಯಾಟದಲ್ಲಿ 66 ರನ್‌ ಪೇರಿಸಿ ಹೋರಾಟವೊಂದನ್ನು ಪ್ರದರ್ಶಿಸಿದರು. 21 ವರ್ಷದ ಯುವ ಬ್ಯಾಟ್ಸ್‌ಮನ್‌ ಕ್ಯಾಂಫ‌ರ್‌ ಅಜೇಯ 59 ರನ್‌ ಹೊಡೆದರೆ, ಮೆಕ್‌ಬ್ರೈನ್‌ 40 ರನ್‌ ಕೊಡುಗೆ ಸಲ್ಲಿಸಿದರು.

ಇಂಗ್ಲೆಂಡಿನ ಚೇಸಿಂಗ್‌ ಕೂಡ ಆಘಾತಕಾರಿಯಾಗಿತ್ತು. ಜಾಸನ್‌ ರಾಯ್‌ (24), ಬೇರ್‌ಸ್ಟೊ (2), ಜೇಮ್ಸ್‌ ವಿನ್ಸ್‌ (25), ಟಾಮ್‌ ಬ್ಯಾಂಟನ್‌ (11) ವಿಕೆಟ್‌ 78 ರನ್ನಿಗೆ ಉದುರಿ ಹೋಗಿತ್ತು. 5ನೇ ವಿಕೆಟಿಗೆ ಜತೆಗೂಡಿದ ಸ್ಯಾಮ್‌ ಬಿಲ್ಲಿಂಗ್ಸ್‌ (67)-ನಾಯಕ ಇಯಾನ್‌ ಮಾರ್ಗನ್‌ (36) ಮತ್ತೆ ತಂಡಕ್ಕೆ ಹಾನಿ ಆಗದಂತೆ ನೋಡಿಕೊಂಡರು. ಸಿಮಿ ಸಿಂಗ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಮಾರ್ಗನ್‌ ತಂಡದ ಗೆಲುವನ್ನು ಸಾರಿದರು. ದ್ವಿತೀಯ ಪಂದ್ಯ ಇದೇ ಅಂಗಳದಲ್ಲಿ ಶನಿವಾರ ರಾತ್ರಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌-44.4 ಓವರ್‌ಗಳಲ್ಲಿ 172 (ಕ್ಯಾಂಫ‌ರ್‌ ಔಟಾಗದೆ 59, ಮೆಕ್‌ಬ್ರೈನ್‌ 40, ವಿಲ್ಲಿ 30ಕ್ಕೆ 5, ಮಹಮೂದ್‌ 36ಕ್ಕೆ 2 ವಿಕೆಟ್‌). ಇಂಗ್ಲೆಂಡ್‌-27.5 ಓವರ್‌ಗಳಲ್ಲಿ 4 ವಿಕೆಟಿಗೆ 174 (ಬಿಲ್ಲಿಂಗ್ಸ್‌ ಔಟಾಗದೆ 67, ಮಾರ್ಗನ್‌ ಔಟಾಗದೆ 36, ಯಂಗ್‌ 56ಕ್ಕೆ 2 ವಿಕೆಟ್‌).

ಪಂದ್ಯಶ್ರೇಷ್ಠ: ಡೇವಿಡ್‌ ವಿಲ್ಲಿ.

Advertisement

Udayavani is now on Telegram. Click here to join our channel and stay updated with the latest news.

Next