ಹೊಸದಿಲ್ಲಿ: ವನಿತಾ ಪ್ರೀಮಿಯರ್ ಲೀಗ್ ನ ಅರ್ಧದಷ್ಟು ಪಂದ್ಯಗಳು ಮುಗಿಯುತ್ತಾ ಬಂದಿದ್ದು, ಪುರುಷರ ಐಪಿಎಲ್ ಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಫ್ರಾಂಚೈಸಿಗಳು ತಯಾರಿಯಲ್ಲಿ ತೊಡಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ಗಾಯಗೊಂಡ ಕಾರಣದಿಂದ ಈ ಸೀಸನ್ ಗೆ ನೂತನ ನಾಯಕನ ನೇಮಕ ಮಾಡಲಾಗಿದೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹೆಡ್ ಕೋಚ್ ರಿಕಿ ಪಾಂಟಿಂಗ್ ಮತ್ತು ಟೀಂ ಮ್ಯಾನೇಜ್ ಮೆಂಟ್ ಈ ಬಗ್ಗೆ ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಅಕ್ಷರ್ ಪಟೇಲ್ ಅವರು ಉಪ ನಾಯಕರಾಗಿದ್ದಾರೆ. ಅಧಿಕೃತ ಘೋಷಣೆ ಮಾಡಲಾಗಿದೆ.
ಡಿಸೆಂಬರ್ ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ಪಂತ್ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ ಸಂಪೂರ್ಣ ಕೂಟದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಮಧ್ಯಂತರ ಆಧಾರದ ಮೇಲೆ ತಂಡವನ್ನು ಮುನ್ನಡೆಸಲು ವಾರ್ನರ್ ಅವರನ್ನು ನೇಮಿಸಲಾಗಿದೆ.
ವಾರ್ನರ್ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿರುವುದು ಇದು ಎರಡನೇ ಬಾರಿ. 2009 ರಿಂದ 2013 ನಡುವಿನ ಫ್ರಾಂಚೈಸ್ ನೊಂದಿಗೆ ಅವರ ಹಿಂದಿನ ಅವಧಿಯಲ್ಲಿ, ಅವರು ಒಂದೆರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು. 2014 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದ ವಾರ್ನರ್ 2016 ರಲ್ಲಿ ತಂಡಕ್ಕೆ ಚೊಚ್ಚಲ ಪ್ರಶಸ್ತಿಗೆ ಗೆದ್ದಿದ್ದರು.