ಮುಂಬಯಿ: ಐಪಿಎಲ್ ಪ್ರಯಾಣ ಆರಂಭವಾದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಮರಳಿರುವ ಡೇವಿಡ್ ವಾರ್ನರ್ ಇದೀಗ ತಂಡದ ನಾಯಕ ರಿಷಬ್ ಪಂತ್ ಅವರಿಂದ ಒಂಟಿ ಕೈಯಿಂದ ಹೇಗೆ ಭರ್ಜರಿ ಹೊಡೆತ ನೀಡುವುದರ ಬಗ್ಗೆ ಅಭ್ಯಾಸ ಮಾಡಲಿದ್ದಾರೆ.
ಆಸ್ಟ್ರೇಲಿಯದ ಸ್ಟಾರ್ ಆಟಗಾರ ವಾರ್ನರ್ 2009ರಲ್ಲಿ ಡೆಲ್ಲಿ ಫ್ರಾಂಚೈಸಿ ಮೂಲಕ ಐಪಿಎಲ್ ಬಾಳ್ವೆ ಆರಂಭಿಸಿದ್ದರು. ಅವರೀಗ ಗುರುವಾರ ನಡೆಯುವ ಲಕ್ನೋ ವಿರುದ್ಧದ ಪಂದ್ಯಕ್ಕಾಗಿ ತಂಡದ ಆಯ್ಕೆಗೆ ಲಭ್ಯರಿರಲಿದ್ದಾರೆ.
ಒಂದು ಕೈಯಿಂದ ಹೇಗೆ ಭರ್ಜರಿಯಾಗಿ ಹೊಡೆಯುವುದನ್ನು ರಿಷಬ್ ಅವರಿಂದ ಕಲಿಯಲಿದ್ದೇನೆ. ಅವರೊಬ್ಬ ಯುವ ಆಟಗಾರ ಮತ್ತು ನಾಯಕತ್ವದ ಕಲೆಯನ್ನು ಕಲಿಯುತ್ತಿದ್ದಾರೆ. ಅವರೊಬ್ಬ ಭಾರತೀಯ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರೊಂದಿಗೆ ಬ್ಯಾಟಿಂಗ್ ಮಾಡುವುದನ್ನು ಕಾಯುತ್ತಿದ್ದೇನೆ ಎಂದು ವಾರ್ನರ್ ಹೇಳಿದ್ದಾರೆ.
ಇದನ್ನೂ ಓದಿ:ದೇರಳಕಟ್ಟೆ: ಡಿವೈಡರ್ ಏರಿ ಬೈಕ್ ಗೆ ಗುದ್ದಿದ ಕಾರು; ಮೂರು ದಾರಿದೀಪಗಳಿಗೂ ಹಾನಿ
ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಕರ್ತವ್ಯ ನಿರ್ವಹಿಸುವ ಅವಕಾಶ ಸಿಕ್ಕ ಬಗ್ಗೆಯೂ ವಾರ್ನರ್ ಮಾತನಾಡಿದ್ದಾರೆ. ಪಾಂಟಿಂಗ್ ಮಾರ್ಗದರ್ಶನದಲ್ಲಿ ಡೆಲ್ಲಿ ತಂಡ ಉತ್ತಮ ನಿರ್ವಹಣೆ ನೀಡಿದೆ. ಅವರೊಬ್ಬ ಆಸ್ಟ್ರೇಲಿಯ ತಂಡದ ಶ್ರೇಷ್ಠ ಆಟಗಾರ ಮತ್ತು ಇದೀಗ ಕೋಚ್ ಆಗಿ ಅವರಿಗೆ ಒಳ್ಳೆಯ ಗೌರವ ಕೂಡ ಇದೆ. ಅವರೊಂದಿಗೆ ಕರ್ತವ್ಯ ನಿಭಾಯಿಸಲು ಎದುರು ನೋಡುತ್ತಿದ್ದೇನೆ ಎಂದು ವಾರ್ನರ್ ತಿಳಿಸಿದರು.
ಪರಿಪೂರ್ಣ ಆಟ ಪ್ರದರ್ಶಿಸಲು ನಾವು ಪ್ರಯತ್ನಿಸಬೇಕಾಗಿದೆ. ಪಂದ್ಯದ ಫಲಿತಾಂಶಕ್ಕೆ ಫೀಲ್ಡಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಶ್ರೇಷ್ಠ ಮಟ್ಟದ ಫೀಲ್ಡಿಂಗ್ ಮಾಡಿದರೆ ಈ ಕೂಟದಲ್ಲಿ ಗಮನಾರ್ಹ ನಿರ್ವಹಣೆ ನೀಡಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.