Advertisement

ದೇವ ನಗರಿಯೀಗ ಯೋಗಪಟುಗಳ ತಾಣ

11:26 AM Jun 21, 2020 | Naveen |

ದಾವಣಗೆರೆ: ಶಿಕ್ಷಣ ನಗರಿ, ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಇದೀಗ ಯೋಗಪಟುಗಳ ನಗರವಾಗಿ ಹೊರ ಹೊಮ್ಮುತ್ತಿದೆ!.

Advertisement

ಹೌದು, ದಾವಣಗೆರೆಯಲ್ಲಿ ಪ್ರತಿ ನಿತ್ಯ, ಸಂಜೆ ವೇಳೆ ಯೋಗದ ಶಿಬಿರ ನಿರಂತರವಾಗಿ ನಡೆಯುತ್ತವೆ. ಸಾವಿರಾರು ಜನ ಯೋಗಪಟುಗಳು ಯೋಗಾಭ್ಯಾಸ ನಡೆಸುತ್ತಿದ್ದಾರೆ. ದಾವಣಗೆರೆಯಲ್ಲಿ ನಿರಾಮಯ ಯೋಗ ಕೇಂದ್ರ, ಶಿರಡಿ ಸಾಯಿಬಾಬಾ ಯೋಗ ಕೇಂದ್ರ, ವನಿತಾ ಯೋಗ ಕೇಂದ್ರ, ಪರಮಾನಂದ ಯೋಗ ಕೇಂದ್ರ, ಬಕ್ಕೇಶ್ವರ ಯೋಗ ಕೇಂದ್ರ, ಅಕ್ಕಮಹಾದೇವಿ ಯೋಗ ಕೇಂದ್ರ, ಜಯದೇವ ಯೋಗ ಕೇಂದ್ರ, ಸಂಚಾರಿ ಯೋಗ ಕೇಂದ್ರ, ಪತಂಜಲಿ ಯೋಗ ಕೇಂದ್ರ, ಶ್ರೀ ಪತಂಜಲಿ ಯೋಗ ಕೇಂದ್ರ ಒಳಗೊಂಡಂತೆ 80ಕ್ಕೂ ಅಧಿಕ ಯೋಗ ಕೇಂದ್ರಗಳಿವೆ. ಎಲ್ಲಾ ಯೋಗ ಕೇಂದ್ರಗಳು ಪ್ರತಿ ನಿತ್ಯ ಯೋಗ ಪಸರಿಸುವ ಮಹತ್ಕಾರ್ಯದಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಬಹುತೇಕ ಉಚಿತವಾಗಿ ಯೋಗ ಶಿಬಿರ ನಡೆಸುತ್ತಿವೆ ಎನ್ನುವುದೇ ಗಮನಾರ್ಹ ವಿಚಾರ.

ಎಲ್ಲಾ ಯೋಗ ಕೇಂದ್ರಗಳು ಜಿಲ್ಲಾ ಯೋಗ ಒಕ್ಕೂಟದಲ್ಲಿ ಸೇರ್ಪಡೆಯಾಗಿ ಪ್ರತಿ ವರ್ಷ ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ವಿನಲ್ಲಿ ಮಹತ್ತರ ಭೂಮಿಕೆಯನ್ನು ನಿಭಾಯಿಸುತ್ತಿವೆ. ಪ್ರತಿ ವರ್ಷ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಅರಮನೆ ನಗರಿ ಮೈಸೂರು ಹೊರತುಪಡಿಸಿದರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಬಂಧುಗಳು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸುವುದು ದಾವಣಗೆರೆಯಲ್ಲಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಪ್ತಾಹ, 80-100 ಪ್ರದೇಶಗಳಲ್ಲಿ ಉಚಿತವಾಗಿ ಯೋಗ ಶಿಬಿರ ಆಯೋಜನೆ, ವಾಕಾಥಾನ್‌, ಸೈಕಲ್‌ ಜಾಥಾ… ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ವೈರಸ್‌ ಹರಡುವಿಕೆ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಆದರೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮುಂದುವರೆಯಬೇಕು ಎಂದು ಕೆಲವೇ ಗಣ್ಯರ ಸಮಕ್ಷಮ ದಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ವಾಹಿನಿ, ಫೇಸ್‌ಬುಕ್‌, ಯೂ-ಟೂಬ್‌ಗಳಲ್ಲಿ ಪ್ರಸಾರ ಮಾಡುವ ಮೂಲಕ ಮನೆ-ಮನಗಳಿಗೆ ಯೋಗ ತಲುಪಿಸುವ ಕಾರ್ಯಕ್ಕೆ ಜಿಲ್ಲಾ ಯೋಗ ಒಕ್ಕೂಟ ಸಜ್ಜಾಗಿದೆ.

ದಾವಣಗೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಹೇಳಿಕೊಡುವಂತಹವರು ಇದ್ದಾರೆ. ಇಲ್ಲಿನ ಅನೇಕ ಯೋಗಪಟುಗಳು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸುವ ಮೂಲಕ ದಾವಣಗೆರೆಯ ಹೆಸರು ಮಿನುಗುವಂತೆ ಮಾಡುತ್ತಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿ ಯೋಗದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಕಲಿತಂತಹವರೇ ಯೋಗ ಮಾಡಬೇಕು. ಅನ್ನುವ ನಿಯಮವೇನು ಇಲ್ಲ. ಕಲಿಯದೇ ಇದ್ದವರೂ ಸಹ ಯೋಗದಲ್ಲಿ ತೊಡಗಿ ನಿರೋಗಿಗಳಾಗಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂಬುದೇ ಜಿಲ್ಲಾ ಯೋಗ ಒಕ್ಕೂಟದ ಮಹಾ ಅಭಿಲಾಷೆ. ಅಂತಾರಾಷ್ಟ್ರೀಯ ಯೋಗದ ದಿನ ಸೂರ್ಯ ನಮಸ್ಕಾರ ಮಾಡುವ ಮೂಲಕವಾದರೂ ಯೋಗದತ್ತ ಚಿತ್ತ ಹರಿಸುವಂತಾದಾಗ ಎಲ್ಲವೂ ಸಾರ್ಥಕ ಎಂದು ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್‌. ವಾಸುದೇವ್‌ ರಾಯ್ಕರ್‌ ಹೇಳುತ್ತಾರೆ.

Advertisement

ಬಹಳಷ್ಟು ಕಡೆಯಲ್ಲಿ ಹಣ ಪಡೆದೇ ಯೋಗ ಕಲಿಸಲಾಗುತ್ತದೆ. ಆದರೆ ನಮ್ಮ ಪತಂಜಲಿ ಯೋಗ ಕೇಂದ್ರದ ಮೂಲಕ ಪ್ರತಿ ದಿನ ಉಚಿತವಾಗಿ 10ಕ್ಕೂ ಹೆಚ್ಚು ಕಡೆ ಯೋಗ ಕಲಿಸಿಕೊಡಲಾಗುತ್ತಿದೆ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವ ಮಹಿಳೆಯೊಬ್ಬರು ಯೋಗಾಭ್ಯಾಸದ ಮೂಲಕ ಇತರೆ ಸಾಮಾನ್ಯರಂತೆ ಜೀವನ ನಡೆಸುವಂತಾಗಿದ್ದಾರೆ. ಅದಕ್ಕಿಂತಲೂ ಇನ್ನೇನು ಬೇಕು ಎಂದು ಪತಂಜಲಿ ಯೋಗ ಕೇಂದ್ರದ ಎನ್‌.ವಿ. ಸುನೀಲ್‌ಕುಮಾರ್‌ ಪ್ರಶ್ನಿಸುತ್ತಾರೆ.ಮೆಡಿಕಲ್‌ ಹಬ್‌, ಶಿಕ್ಷಣ ನಗರಿ ದಾವಣಗೆರೆ ನಿಧಾನವಾಗಿ ಯೋಗಪಟುಗಳ ನಗರಿಯಾಗಿ ಬೆಳೆಯುತ್ತಿದೆ. ಉತ್ತಮ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕಾಣಿಕೆ ನೀಡುತ್ತಿದೆ.

ಹೆಣ್‌ಮಕ್ಳೆ  ಸ್ಟ್ರಾಂಗು ಗುರು
ದಾವಣಗೆರೆಯ ಯೋಗ ಕೇಂದ್ರಗಳಲ್ಲಿ ಅತೀ ಹೆಚ್ಚಿನ ಸದಸ್ಯತ್ವ ಇರುವುದೇ ವನಿತಾ ಯೋಗ ಕೇಂದದಲ್ಲಿ. ಇಲ್ಲಿ 250ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪ್ರತಿ ದಿನ 80-100ಕ್ಕೂ ಹೆಚ್ಚು ಮಹಿಳೆಯರು ಯೋಗಾಭ್ಯಾಸ ಮಾಡುತ್ತಾರೆ. 75 ವರ್ಷದ ಹಿರಿಯರಿಂದ ಹಿಡಿದು, 8-12 ವರ್ಷದ ಬಾಲಕಿಯರು ಶಿಬಿರಕ್ಕೆ ಆಗಮಿಸುತ್ತಾರೆ. ರಥಸಪ್ತಮಿ ಅಂಗವಾಗಿ ದಾಖಲೆ ಪ್ರಮಾಣದಲ್ಲಿ 250ಕ್ಕೂ ಹೆಚ್ಚು ಶಿಬಿರಾರ್ಥಿಗಳು ಸೂರ್ಯ ನಮಸ್ಕಾರ ಮಾಡಿದ್ದಿದೆ. 24 ಗಂಟೆ ಸೂರ್ಯ ನಮಸ್ಕಾರ, ಹೋಮ, ಭಜನೆ ಮಾಡಲಾಗಿದೆ ಎಂದು ಯೋಗ ಕೇಂದ್ರದ ಉತ್ತಂಗಿ ಪ್ರಕಾಶ್‌ ತಿಳಿಸುತ್ತಾರೆ.

ಸಂಚಾರಿ ಯೋಗ
ಅನೇಕರಿಗೆ ಕೆಲಸ ಇನ್ನಿತರೆ ಒತ್ತಡದಿಂದ ಶಿಬಿರಗಳಿಗೆ ಬರಲಿಕ್ಕಾಗುವುದಿಲ್ಲ, ಅಂತಹವರಿಗಾಗಿ ಅವರು ಇರುವ ಕಡೆ ತೆರಳಿ ಅದೂ ಉಚಿತವಾಗಿ ಯೋಗ ಹೇಳಿಕೊಡುವರು ದಾವಣಗೆರೆಯಲ್ಲಿ ಇದ್ದಾರೆ.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next