Advertisement

ದಾವಣಗೆರೆ: ಗುರುವಿಗೇ ಕುಚೇಷ್ಟೆ,ವಿಕೃತ ಖುಷಿ ವಿಡಿಯೋ ವೈರಲ್;ಕ್ರಮಕ್ಕೆ ಆದೇಶ

03:50 PM Dec 10, 2021 | Team Udayavani |

ಚನ್ನಗಿರಿ: ಶಿಕ್ಷಕ ಸ್ಥಾನ ಎಂದರೇ ಎಲ್ಲರೂ ತಲೆಬಾಗಿ ಗೌರವಿಸುವ ಸ್ಥಾನ ಅಂತಹ ಸ್ಥಾನದಲ್ಲಿರುವ ಶಿಕ್ಷಕರೊಬ್ಬರನ್ನು ವಿದ್ಯಾರ್ಥಿಗಳು ಅಪಮಾನ ಗೊಳಿಸಿ, ವಿಕೃತಿಯನ್ನು ಮೇರೆದಿರುವ ಘಟನೆ ತಾಲೂಕಿನ ನಲ್ಲೂರು ಪ್ರೌಢಶಾಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಕೊಠಡಿಯಲ್ಲಿ ಪಾಠ ಮಾಡಲು ತೆರಳಿದ ಹಿಂದಿ ಶಿಕ್ಷಕ ಪ್ರಕಾಶ್ ಬೋಗಾರ್ ಗೆ ಕುಚೇಷ್ಟೆ ಮಾಡಿದ ವಿದ್ಯಾರ್ಥಿಗಳು ವಿಡಿಯೋ ಮಾಡಿ ವಿಕೃತಿ ಪ್ರದರ್ಶನ ಮಾಡಿದ್ದಾರೆ ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತು ಕೊಂಡ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಲ್ಲಿನ ಶಿಕ್ಷಕರನ್ನು ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಬೋಗಾರ್ ಅವರಿಗೆ ಶಾಲೆಯ ಐದಾರು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲ ಜೊತೆಗೆ ಶಿಕ್ಷಕರ ತಲೆ ಮೇಲೆ ಬಕೆಟ್ ಇಟ್ಟು ವಿಕೃತಿ ಪ್ರದರ್ಶಿಸಿ ಸಂತೋಷ ಪಟ್ಟಿದ್ದಾರೆ. ಜೊತೆಗೆ ಶಿಕ್ಷಕರಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಮಾತ್ರವಲ್ಲ, ಈ ವಿಡಿಯೋ ಮಾಡಿ ಖುಷಿಪಡುತ್ತಾ ಮನಸ್ಸಿಗೆ ಬಂದಂತ ರೀತಿಯಲ್ಲಿ ಮಾತನಾಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮಾಡಿದ್ದ ವಿಡಿಯೋ ನಿನ್ನೆ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಕಾಶ್ ಬೋಗಾರ್ ಅವರು ಅತ್ಯಂತ ಸರಳ, ಸೌಮ್ಯ ಸ್ವಭಾವದ ಶಿಕ್ಷಕರು. ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದರು. ಹಾಗಾಗಿ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು, ಏನಾದರೂ ದೂರು ಕೊಟ್ಟರೆ ಭವಿಷ್ಯ ಹಾಳಾಗುತ್ತದೆ ಎಂದುಕೊಂಡು ಸುಮ್ಮನಾಗಿದ್ದರು. ಇನ್ನು ನಲ್ಲೂರು ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಾರೆ. ಮೊದಲಿನಿಂದಲೂ ಶಿಕ್ಷಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಇಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಈಗ ವಿದ್ಯಾರ್ಥಿಗಳು ಮಾಡಿರುವ ಕುಚೇಷ್ಟೆಯಿಂದ ಕಾಲೇಜಿಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲೇಜಿಗೆ ಶಾಸಕ ಮಾಡಾಳ್ ಭೇಟಿ

Advertisement

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಲ್ಲೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ಶಿಕ್ಷಕರು, ಪ್ರಾಂಶುಪಾಲರು, ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ. ಶಿಕ್ಷಕ ಪ್ರಕಾಶ್ ಅವರಿಗೆ ಅವಮಾನ ಮಾಡಿರುವ ವಿದ್ಯಾರ್ಥಿಗಳು ಯಾರು? ಎಲ್ಲಿಯವರು? ಹೆಸರೇನು? ಎಂಬ ಕುರಿತು ವಿಚಾರಿಸಿದ್ದಾರೆ. ಗ್ರಾಮಸ್ಥರ ಜೊತೆ ಈ ವಿದ್ಯಾರ್ಥಿಗಳು ಬೇರೆ ಯಾವುದಾದರೂ ಈ ರೀತಿಯ ಕುಚೇಷ್ಟೆ ಮಾಡಿದ್ದಾರಾ ಎಂಬ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡೋಣ ಎಂದು ಹೇಳಿದ್ದಾರೆ. ಈ ವೇಳೆ ಈ ಘಟನೆಯಿಂದ ನಲ್ಲೂರು ಹಾಗೂ ಕಾಲೇಜಿಗೆ ಕೆಟ್ಟ ಹೆಸರು ಬಂದಂತಾಗಿದೆ.
ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಬೇಕು. ಮುಂಬರುವ ದಿನಗಳಲ್ಲಿ ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ತಪ್ಪು ಮಾಡಿದವರಿಗೆ ಶಿಕ್ಷೆ

ದಾವಣಗೆರೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರಿಗೆ ಕುಚೇಷ್ಟೆ ಮಾಡಿ ಅವಮಾನ ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಿಕ್ಷಕರ ಕಡೆಯಿಂದ ತಪ್ಪಿದ್ದರೂ ಸಹ ಕ್ರಮ ಆಗುತ್ತೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಒಟ್ಟಾರೆ ವಿದ್ಯಾರ್ಥಿಗಳು ತಮಾಷೆಗೆ ಮಾಡಿದ್ದಾರೋ ಅಥವಾ ಉದ್ದೇಶಪೂರ್ವಕವಾಗಿ ಮಾಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ತಾಲೂಕು ಶಿಕ್ಷಣಾಧಿಕಾರಿ, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ ಆಗಿರುವ ಘಟನೆ ಬಗ್ಗೆ ಸಮಗ್ರ ಪಡೆಯಲಿದ್ದಾರೆ ಎಂದು ನಲ್ಲೂರು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next