Advertisement

ದಾವಣಗೆರೆ: ನಾವೀನ್ಯತೆ ಅಳವಡಿಕೆಯಿಂದ ಯಶಸ್ಸು: ಪ್ರೊ| ತ್ಯಾಗರಾಜ್‌

03:49 PM Sep 13, 2024 | Team Udayavani |

ಉದಯವಾಣಿ ಸಮಾಚಾರ
ದಾವಣಗೆರೆ: ಬ್ಯಾಂಕಿಂಗ್‌ ಮತ್ತು ವಿಮಾ ಕ್ಷೇತ್ರಗಳಲ್ಲಿ ಸುಸ್ಥಿರ ಅಭ್ಯಾಸಗಳನ್ನು ಸಂಯೋಜಿಸುವ ಮಾರ್ಗ ಹಲವಾರು
ಅಡಚಣೆಗಳಿಂದ ತುಂಬಿದ್ದರೂ, ಉತ್ತಮ ಅವಕಾಶಗಳ ಸಾಮರ್ಥ್ಯ ಅಪಾರವಾಗಿದೆ.  ನಾವೀನ್ಯತೆ ಅಳವಡಿಸಿಕೊಳ್ಳುವುದರಲ್ಲಿ
ಯಶಸ್ಸು ಅಡಗಿದೆ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಸಿ. ಎಂ. ತ್ಯಾಗರಾಜ್‌ ಹೇಳಿದರು.

Advertisement

ದಾವಣಗೆರೆ ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣೆ ವಿಭಾಗದ ವತಿಯಿಂದ ಏರ್ಪಡಿಸಿದ್ದ ಬ್ಯಾಂಕಿಂಗ್‌ ಮತ್ತು ವಿಮಾ ವಲಯದಲ್ಲಿ ಸುಸ್ಥಿರತೆ ಮತ್ತು ತಂತ್ರಜ್ಞಾನ-ಸವಾಲುಗಳು ಮತ್ತು ಅವಕಾಶಗಳು ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸುಸ್ಥಿರ ಹಣಕಾಸಿನ ಭವಿಷ್ಯದಲ್ಲಿ ಪರಿಸರ, ಸಾಮಾಜಿಕ ಮತ್ತು ಆಡಳಿತದ ಜವಾಬ್ದಾರಿ ನಿರ್ವಹಣೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಮುಖ್ಯವಾಗಿವೆ. ಡಿಜಿಟಲ್‌ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತಿತರ ತಾಂತ್ರಿಕತೆಯು ಬ್ಯಾಂಕ್‌ ಗಳು ಮತ್ತು ವಿಮಾದಾರರು ಸಮರ್ಥವಾಗಿ ಸೇವೆ ಒದಗಿಸಲು ಅವಕಾಶ ಮಾಡಿಕೊಡುತ್ತದೆ.

ಹೊಸ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗಿವೆ. ಅವುಗಳ ಸದ್ಬಳಕೆಯೂ ಮುಖ್ಯ ಎಂದು ತಿಳಿಸಿದರು.
ತಂತ್ರಜ್ಞಾನವು ಬ್ಯಾಂಕಿಂಗ್‌ ಮತ್ತು ವಿಮಾ ಕ್ಷೇತ್ರಗಳಲ್ಲಿನ ಅನೇಕ ಆವಿಷ್ಕಾರಗಳ ಹಿಂದಿನ ಚಾಲನಾ ಶಕ್ತಿಯಾಗಿ ಕಾರ್ಯ
ನಿರ್ವಹಿಸುತ್ತಿದೆ. ಇವುಗಳ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಸುಸ್ಥಿರತೆ ಕಾಳಜಿಯೂ ಮುಖ್ಯ ಆದ್ಯತೆ ಆಗಬೇಕಾಗಿದೆ. ಬೆಳವಣಿಗೆಯ
ಅವಕಾಶಗಳ ಜೊತೆಗೆ ಹೊಸ ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ನಿರ್ವಹಿಸುವ ಕೌಶಲ್ಯವೂ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ|ಬಿ.ಡಿ.ಕುಂಬಾರ ಮಾತನಾಡಿ, ಮೊಬೈಲ್‌ ಬ್ಯಾಂಕಿಂಗ್‌, ಡಿಜಿಟಲ್‌ ವ್ಯಾಲೆಟ್‌ಗಳು ಮತ್ತು ಆನ್‌ಲೈನ್‌ ವೇದಿಕೆಗಳಿಂದಾಗಿ ಬ್ಯಾಂಕುಗಳು ಭೌತಿಕ ಶಾಖೆಗಳ ಮೇಲಿನ ಅವಲಂಬನೆಯನ್ನು
ಕಡಿಮೆ ಮಾಡಿವೆ. ಹೀಗಾಗಿ ಶಕ್ತಿಯ ಬಳಕೆ ಕಡಿಮೆಯಾಗುತ್ತಿದೆ ಎಂದರು.

Advertisement

ಬೆಳಗಾವಿ ವಿಶ್ವವಿದ್ಯಾಲಯದ ಪ್ರೊ|ಎಸ್‌.ಸಿ. ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವ ಮತ್ತು ವಿಭಾಗದ ಅಧ್ಯಕ್ಷ
ಪ್ರೊ|ಆರ್‌.ಶಶಿಧರ ಪ್ರಾಸ್ತಾವಿಕ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ, ಪ್ರೊ.ಜೆ.ಕೆ.ರಾಜು, ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಡಾ.ಸುನಿತಾ ಆರ್‌. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next