ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ 5.0 ನಡುವೆ ರಾಜ್ಯ ಸರ್ಕಾರ ಜೂ.8ರಿಂದ ದೇವಸ್ಥಾನಗಳಿಗೆ ಅನುಮತಿ ನೀಡಿದ್ದು ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನವನ್ನು ಸಹ ಭಕ್ತರ ದರ್ಶನಾವಕಾಶಕ್ಕೆ ಸಜ್ಜುಗೊಳಿಸಲಾಗಿದೆ.
ಕೋವಿಡ್ ವೈರಸ್ ಬಿಟ್ಟು ಬಿಡದೆ ಕಾಡುತ್ತಿರುವುದನ್ನಯ ತಡೆಗಟ್ಟಲು ಮಾರ್ಚ್ ಮಾಹೆಯಿಂದ ಜಾರಿಯಲ್ಲಿರುವ ಲಾಕ್‌ಡೌನ್ ನಿಂದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನವನ್ನೂ ಮುಚ್ಚಲಾಗಿತ್ತು. ಲಾಕ್ ಡೌನ್ ನಡುವೆ ಕೆಲ ಸಡಲಿಕೆ ನೀಡಿದ್ದರಿಂದ ದೇವತೆಯ ಪೂಜಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ಸೋಮವಾರದಿಂದ ಅನುಮತಿ ನೀಡಲಾಗುವುದು ಎಂಬ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಇಡೀ ದೇವಸ್ಥಾನ, ಸುತ್ತಮುತ್ತಲಿನ ಪ್ರದೇಶದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿತ್ತು.
ಮತ್ತೆ ಭಾನುವಾರ (ಜೂ.7) ಬೆಳಗ್ಗೆ 9ಕ್ಕೆ ಅಗ್ನಿಶಾಮಕದಳದಿಂದ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದರು. ಸರ್ಕಾರ ದೇವಸ್ಥಾನಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನವನ್ನೂ ತೆರೆಯಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸೇಷನ್ ಒಳಗೊಂಡಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ಮೆಟ್ಟಿಲುಗಳ ಬಳಿ ಕೈ, ಕಾಲು ತೊಳೆದುಕೊಳ್ಳಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಸಂದರ್ಭದಲ್ಲಿ ಬಳಸಲಾಗುವ ಶವರ್ ಮತ್ತು ನಲ್ಲಿಗಳ ಬಳಿ ಸೋಪಿನ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಭಕ್ತರ ಸುರಕ್ಷತೆಗೆ ಏನು ಬೇಕೋ ಆ ಎಲ್ಲಾ ಕ್ರಮಗಳನ್ನ ದೇವಸ್ಥಾನದ ವತಿಯಿಂದ ಮಾಡಲಾಗುತ್ತಿದೆ ಎಂದು ತಿಳಿಸಿದರು. ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಲ್ಲಲ್ಲಿ ಬರೆಯಲಾಗಿರುವ ಬಾಕ್ಸ್‌ಗಳಲ್ಲೆ ನಿಲ್ಲಬೇಕು. ಹೂವು, ಹಣ್ಣು, ಕಾಯಿ, ಪ್ರಸಾದ ಏನನ್ನು ತರುವಂತೆಯೇ ಇಲ್ಲ. ದೇವಿ ದರ್ಶನಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ ಎಂದರು.
ದೇವಿಗೆ ಪದೆ ಪದೇ ಮಂಗಳಾರತಿ ಮಾಡುವುದಿಲ್ಲ. ಒಮ್ಮೆ ಎಲ್ಲಾ ಪೂಜಾ ಕಾರ್ಯ ನೆರವೇರಿಸಿ, ಮಹಾ ಮಂಗಳಾರತಿ ಮಾಡಲಾಗುತ್ತದೆ. ಭಕ್ತರು ಅದೇ ಮಂಗಳಾರತಿ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಮತ್ತು ಇತರರ ಆರೋಗ್ಯದ ಸುರಕ್ಷತೆಗೆ ಗಮನ ನೀಡಬೇಕು ಎಂದು ಮನವಿ ಮಾಡಿದರು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ದರ್ಶನಕ್ಕೆ ಎಲ್ಲಾ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಟ್ರಸ್ಟ್ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಇತರೆ ಧರ್ಮ ದರ್ಶಿಗಳು, ಬಾಬುದಾರರು, ಗೌಡರು, ಶ್ಯಾನುಭೋಗರು ಎಲ್ಲರೂ ಚರ್ಚಿಸಿ, ನಿರ್ಧಾರದಂತೆ ಸೋಮವಾರ ಇಲ್ಲವೇ ಮಂಗಳವಾರ ಭಕ್ತಾದಿಗಳಿಗೆ ಆವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.