Advertisement

ಪಾಕ್‌ ಭಾರತಕ್ಕೆ ಸೇರಿದಾಗಲೇ ಸಂಪೂರ್ಣ ನೆಮ್ಮದಿ

11:19 AM Sep 20, 2019 | Naveen |

ದಾವಣಗೆರೆ: ಪಾಕ್‌ ಆಕ್ರಮಿತ ಕಾಶ್ಮೀರವಲ್ಲ, ಇಡೀ ಪಾಕಿಸ್ತಾನ ಭಾರತಕ್ಕೆ ಸೇರಿದಾಗಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿ ಸ್ವರ್ಗದಲ್ಲಿರುವ ದೇಶಪ್ರೇಮಿಗಳ ಆತ್ಮಕ್ಕೆ ಸಂಪೂರ್ಣ ಶಾಂತಿ ಸಿಗಲಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ಪರಿಚ್ಛೇದ 370 ರದ್ದತಿ, ಒಂದು ದೇಶ-ಒಂದು ಸಂವಿಧಾನ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕಾಶ್ಮೀರದಲ್ಲಿದ್ದ ಪರಿಚ್ಛೇದ 370 ರದ್ದತಿಯಿಂದ ದೇಶಪ್ರೇಮಿಗಳ 70 ವರ್ಷಗಳ ಕನಸು ನನಸಾಗಿದೆ. ಈ ಮಹತ್ಕಾರ್ಯಕ್ಕಾಗಿ ಹೋರಾಡಿ, ಪ್ರಾಣ ತ್ಯಾಗ ಮಾಡಿ ಸ್ವರ್ಗದಲ್ಲಿರುವ ಡಾ|ಶ್ಯಾಮಪ್ರಸಾದ ಮುಖರ್ಜಿ, ಪಂಡಿತ್‌ ದೀನ್‌ದಯಾಳ ಉಪಾಧ್ಯಾಯ ಸೇರಿದಂತೆ ಅನೇಕ ದೇಶಪ್ರೇಮಿಗಳ ಆತ್ಮಕ್ಕೆ ಒಂದಿಷ್ಟು ನೆಮ್ಮದಿ ಸಿಕ್ಕಿದೆ ಎಂದರು.

ಈವರೆಗೂ ದೇಶಕ್ಕೊಂದು ಸಂವಿಧಾನವಿದ್ದರೆ, ಅದು ಕಾಶ್ಮೀರಕ್ಕೆ ಅನ್ವಯಿಸುತ್ತಿರಲಿಲ್ಲ. ಹಲವು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ ಪಕ್ಷ ಭಾರತ ಹಾಗೂ ಕಾಶ್ಮೀರವನ್ನು ಬೇರೆ ಬೇರೆಯಾಗಿಸಿತ್ತು. ದೇಶದ ಎಲ್ಲಾ ರಾಜ್ಯಗಳಿಗೂ ಒಂದು ಕಾನೂನಾದರೆ ಕಾಶ್ಮೀರಕ್ಕೆ ಬೇರೆ ಕಾನೂನುಗಳಿದ್ದವು. 70 ವರ್ಷಗಳಲ್ಲಿ ದೇಶದಲ್ಲಿ ಹಲವು ಪ್ರಧಾನ ಮಂತ್ರಿಗಳು ಬಂದು ಹೋದರೂ ಯಾರೂ ಸಹ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಲು ಮುಂದಾಗಲಿಲ್ಲ. ಆದರೆ, ಗಂಡುಗಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಚ್ಛೇದ 370 ಕಿತ್ತು ಹಾಕಿ, ಹಲವು ವರ್ಷಗಳ ಕನಸು ಸಾಕಾರಗೊಳಿಸಿದ್ದಾರೆ. ಈ ಮಹತ್ಕಾರ್ಯಕ್ಕೆ ಕಾರಣರಾದ ಕೇಂದ್ರದ ಗೃಹಮಂತ್ರಿ ಅಮಿತ್‌ ಶಾ, ಸ್ವಾತಂತ್ರ್ಯ ನಂತರ ದೇಶದ ಮೊದಲ ಗೃಹಮಂತ್ರಿಯಾಗಿದ್ದ ಸರ್ದಾರ ವಲ್ಲಭಭಾಯ್‌ ಪಟೇಲರಂತೆ ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ಕಾರಣೀಭೂತರಾಗಿದ್ದಾರೆ ಎಂದು ಬಣ್ಣಿಸಿದರು.

ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದು ಮಾಡಿದಲ್ಲಿ ರಕ್ತಪಾತವಾಗಲಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು. ಆದರೆ ಮೋದಿ-ಶಾ ಆ ಪರಿಚ್ಛೇದ ತೆಗೆದು ಹಾಕಿದ ನಂತರ ಇಡೀ ಭಾರತ ಒಂದಾಯಿತು. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಭಾರತೀಯರಾಗಬೇಕು. ಎಲ್ಲರಿಗೂ ಒಂದೇ ಕಾನೂನು ಇರಬೇಕು. ಇಡೀ ಭಾರತವೇ ಒಂದು ಎಂದಾಗಲು ಏಕರೂಪ ನಾಗರಿಕ ಸಂಹಿತೆ ಜಾರಿಯೇ ಕೇಂದ್ರ ಸರ್ಕಾರದ ಮುಂದಿನ ಗುರಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಪ್ರಖರ ಹಿಂದುತ್ವವಾದಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕನಸು ನನಸು ಮಾಡಲು ರಾಜಕೀಯಕ್ಕೆ ಬಂದಿದ್ದಾರೆ. ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ಸಾಕಾರಕ್ಕೆ ಮೋದಿ ಮುಂದಾಗಿದ್ದಾರೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಒಂದೇ ಕಾನೂನು ಜಾರಿ ಮಾಡಲಿದ್ದಾರೆ ಎಂದು ಅವರು ಹೇಳಿದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಮಾತನಾಡಿ, ಕಾಶ್ಮೀರದಲ್ಲಿನ ಪರಿಚ್ಛೇದ 370 ರದ್ದತಿ ಹಿನ್ನೆಲೆ ವಿವರಿಸಿದರು. ಇದಕ್ಕೂ ಮುನ್ನ ಕಾಶ್ಮೀರದ ಹಿಂದಿನ ರಾಜಕೀಯ ಇತಿಹಾಸ ಬಗ್ಗೆ ಕಿರುಚಿತ್ರ ಪ್ರದರ್ಶಿಸಲಾಯಿತು. ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸಂಸದ ಜಿ.ಎಂ.ಸಿದ್ದೇಶ್ವರ್‌, ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಪ್ರೊ|ಎನ್‌.ಲಿಂಗಣ್ಣ, ಎಸ್‌.ವಿ.ರಾಮಚಂದ್ರ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌, ಉಪಾಧ್ಯಕ್ಷ ಸುರೇಂದ್ರ ನಾಯ್ಕ, ‘ಒಂದು ದೇಶ-ಒಂದು ಸಂವಿಧಾನ’ ಕಾರ್ಯಕ್ರಮ ರಾಜ್ಯ ಸಂಚಾಲಕ ಡಾ| ರಮೇಶಕುಮಾರ್‌ ಇನ್ನಿತರರು ಉಪಸ್ಥಿತರಿದ್ದರು. ಜಿಪಂ ಸದಸ್ಯ ಬಿ.ಎಂ.ವಾಗೀಶಸ್ವಾಮಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next