ದಾವಣಗೆರೆ: ತಪ್ಪು ಚಿಕಿತ್ಸೆ ನೀಡಿ ಸಾವಿಗೆ ಕಾರಣವಾಗಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮೃತರ ಸಂಬಂಧಿಕರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗುರುವಾರ ಕೆ.ಆರ್. ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.
ದಾವಣಗೆರೆಯ ಜಯನಗರ ನಿವಾಸಿ ಅನ್ನಪೂರ್ಣಮ್ಮ(65) ಎಂಬುವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವೃದ್ಧೆಯ ಸಂಬಂಧಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು. ವೈದ್ಯರ ಬಂಧನ, ಆಸ್ಪತ್ರೆ ಬಂದ್ ಮಾಡುವಂತೆ ಒತ್ತಾಯಿಸಿದರು.
ಜೂ. 8 ರಂದು ನಮ್ಮ ತಾಯಿ ಅನ್ನಪೂರ್ಣಮ್ಮ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಆಸ್ಪತ್ರೆ ಕರೆದುಕೊಂಡು ಬರಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿ ಗಡ್ಡೆಯಿದೆ. ಸಣ್ಣ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದರು. ಜೂ.13 ರಂದು ಆಪರೇಷನ್ ಸಹ ಮಾಡಲಾಯಿತು. ಆಪರೇಷನ್ ಮಾಡಿದ ನಂತರ ಹೊಲಿಗೆ ಹಾಕದೆ ಹಾಗೆಯೇ ಬಿಟ್ಟಿದ್ದರಿಂದ ಸಮಸ್ಯೆ ಆಗಿತ್ತು. ನಮ್ಮ ಅಮ್ಮನಿಗೆ ಪೂರ್ಣ ಗುಣವಾಗದಿದ್ದರೂ 3 ಲಕ್ಷ ರೂಪಾಯಿ ಬಿಲ್ ಕಟ್ಟಿಸಿಕೊಂಡು ಡಿಸ್ಚಾರ್ಜ್ ಮಾಡಿದರು ಎಂದು ಮಗಳು ನಂದಿನಿ ತಿಳಿಸಿದರು.
ಚಿಗಟೇರಿ ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ್ ಉಳಿಯುವುದಿಲ್ಲ ಎಂದೇ ಹೇಳಿದ್ದರು. ಇವತ್ತು(ಗುರುವಾರ) ಮೃತಪಟ್ಟಿದ್ದಾರೆ. ನಮ್ಮ ಅಮ್ಮನ ಸಾವಿಗೆ ವೈದ್ಯರೇ ಕಾರಣ. ಸರಿಯಾಗಿ ಚಿಕಿತ್ಸೆ ಕೊಟ್ಟಿದ್ದರೆ ಏನೂ ಆಗುತ್ತಿರಲಿಲ್ಲ. ನಮ್ಮ ಅಮ್ಮನ ಸಾವಿಗೆ ಕಾರಣವಾಗಿರುವ ಡಾಕ್ಟರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಬಸವ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ತಿಳಿಸಿದರು.