ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಹಾರ ಧಾನ್ಯ ವಿತರಣೆ ಸೇರಿದಂತೆ ಇನ್ನಿತರೆ ಎಲ್ಲ ಅಗತ್ಯ ಚಟುವಟಿಕೆಗಳನ್ನು ಅಧಿಕಾರಿಗಳು ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳ ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.
ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸ್ತುತ ಇಡೀ ದೇಶವೇ ಸಂಕಷ್ಟದಲ್ಲಿದ್ದು, ಯಾವುದೇ ಒಬ್ಬ ವ್ಯಕ್ತಿ ಊಟ ಇಲ್ಲದೇ ಉಪವಾಸ ಇರಬಾರದೆಂಬ ಸರ್ಕಾರದ ಆಶಯದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರಿಗೆ ಮೂರು ತಿಂಗಳ ಪಡಿತರ ಉಚಿತವಾಗಿ ನೀಡುತ್ತಿದ್ದು, ಇದು ಅವಶ್ಯಕತೆ ಇರುವವರೆಲ್ಲರಿಗೆ ಸಮರ್ಪಕವಾಗಿ ತಲುಪಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ 3 ರಿಂದ 5 ಎಕರೆ ಜಾಗ ಗುರುತಿಸಿ ಆಹಾರ ಇಲಾಖೆ ಸ್ವಂತ ಗೋದಾಮು ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿಗಳ ಮೂಲಕ ವ್ಯವಸ್ಥೆ ಮಾಡಿಕೊಳ್ಳಬೇಕು. ಜೊತೆಗೆ ಪ್ರತಿ ತಾಲ್ಲೂಕುಗಳಲ್ಲೂ ಸ್ವಂತ ಗೋದಾಮಿಗೆ ಜಾಗ ಗುರುತಿಸಬೇಕೆಂದರು. ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ನಕಲು ರೇಷನ್ ಕಾರ್ಡ್‌ದಾರರು ಪಡಿತರ ಪಡೆಯುತ್ತಿದ್ದಾರೆಂಬ ದೂರುಗಳಿದ್ದು, ಅಧಿಕಾರಿಗಳು ತಾಲ್ಲೂಕುಗಳ ಪ್ರತಿ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮೇ 5 ರಿಂದ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಮತ್ತು 2 ಕೆಜಿ ತೊಗರಿಬೇಳೆ ವಿತರಿಸಲು ಸೂಚಿಸಿಲಾಗಿದೆ. ದಾಸ್ತಾನು ಕಡಿಮೆ ಇರುವುದರಿಂದ 1 ಕೆಜಿ ತೊಗರಿಬೇಳೆ ನೀಡಲಾಗುವುದು. ಈ ಪಡಿತರ ವಿತರಣೆಯಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ತಾಕೀತು ಮಾಡಿದರು.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿ ತಾಲೂಕಿನ ಕೆಲವು ಕಡೆ ಹಕ್ಕಿಪಿಕ್ಕಿ ಅಲೆಮಾರಿ ಜನಾಂಗದವರು, ಇತರರು ಸೇರಿ 800ಕ್ಕೂ ಹೆಚ್ಚು ಜನರಿಗೆ ಕಾರ್ಡ್ ಇಲ್ಲ. ಅವರಿಗೂ ಪಡಿತರ ನೀಡಬೇಕು. ಹಲವೆಡೆ ಕಾರ್ಡ್‌ದಾರರು ಪಡಿತರ ಪಡೆಯಲು ದೂರದಿಂದ ಬರಬೇಕಿದ್ದು, ಕಾರ್ಡುಗಳ ಸಂಖ್ಯೆ ವಿಭಜಿಸಿ ಹೊಸ ಪಡಿತರ ಅಂಗಡಿ ಸ್ಥಾಪಿಸಬೇಕೆಂದು ಮನವಿ ಮಾಡಿದರು. ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರಿನಲ್ಲಿ ಈ ರೀತಿ ಸಮಸ್ಯೆ ಇದೆ, ಅಲ್ಲಿಯೂ ಹೊಸ ಪಡಿತರ ಅಂಗಡಿಗಳನ್ನು ತೆರೆಯಬೇಕೆಂದರು.
ಮಾಯಕೊಂಡ ಶಾಸಕ ಪ್ರೊ| ಎನ್. ಲಿಂಗಣ್ಣ ಮಾತನಾಡಿ, ತಮ್ಮ ಕ್ಷೇತ್ರದಲ್ಲಿಯೂ ಅನೇಕ ಬಡವರಿಗೆ ರೇಷನ್ ಕಾರ್ಡ್ ಇಲ್ಲ. ಅವರಿಗೆ ಪಡಿತರ ನೀಡುವ ಜೊತೆಗೆ ಹೊಸ ಪಡಿತರ ಅಂಗಡಿಗಳನ್ನು ತೆರೆಯಬೇಕೆಂದರು. ಶಾಸಕರ ಮನವಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೊರೊನಾ ಸಮಸ್ಯೆ ಮುಗಿದ ನಂತರ ಶಾಸಕರು, ಸಂಸದರು, ಅ ಧಿಕಾರಿಗಳೊಂದಿಗೆ ಸಭೆ ನಡೆಸಿ, ಆಹಾರ ಧಾನ್ಯಸಮರ್ಪಕ ವಿತರಣೆ, ಪಡಿತರ ಚೀಟಿ, ಅಂಗಡಿ, ಇತರೆ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ, ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ , ಇಲಾಖೆ ವತಿಯಿಂದ ವಹಿಸಿದ ಕ್ರಮದ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಟಾರ್, ಮೇಯರ್ ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠ ಹನುಮಂತರಾಯ, ಎಎಸ್‌ಪಿ ರಾಜೀವ್ ಎಂ. ಇತರರು ಸಭೆಯಲ್ಲಿದ್ದರು.