ದಾವಣಗೆರೆ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಸಮಾಜದ ಅಭಿವೃದ್ಧಿ ಮತ್ತು ಹಿಂದೂ ಸಮಾಜ, ಸಂಸ್ಕೃತಿಯ ಉಳಿವಿಗಾಗಿ ಹಗಲಿರುಳು ಶ್ರಮಿಸಿದಂತಹ ತ್ರಿವಿಕ್ರಮರು ಎಂದು ಹುಬ್ಬಳಿಯ ಶ್ರೀ ಪ್ರದ್ಯುಮ್ನಾಚಾರ್ಯ ಜೋಶಿ ಬಣ್ಣಿಸಿದ್ದಾರೆ.
ಭಾನುವಾರ ಶ್ರೀ ಸರ್ವಜ್ಞಾಚಾರ್ಯ ಸೇವಾ ಸಂಘದ ಮಾಧ್ವ ಮಂದಿರದಲ್ಲಿ ಏರ್ಪಡಿಸಿದ್ದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗಾಗಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ತ್ರಿವಿಕ್ರಮನಂತೆ ಹಗಲಿರುಳು ದುಡಿದವರು.
ಅವರ ಸಮಾಜ ಸೇವೆ ಪ್ರತಿಯೊಬ್ಬರಿಗೆ ಮಾದರಿ ಎಂದು ಸ್ಮರಿಸಿದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಮಾಧ್ವ ಸಮಾಜಕ್ಕೆ ಬಹು ದೊಡ್ಡ ಕಾಣಿಕೆ ನೀಡಿದ್ದಾರೆ. ಎಲ್ಲಾ ಮಕ್ಕಳು ಚೆನ್ನಾಗಿ ಓದಬೇಕು. ವಿದ್ಯಾವಂತರಾಗಬೇಕು. ನಮ್ಮ ಭಾರತೀಯ, ಹಿಂದೂ ಸಂಸ್ಕೃತಿಯನ್ನು ಉಳಿಸುವಂತವರಾಗಬೇಕು ಎಂಬ ಮಹಾನ್ ಉದ್ದೇಶದೊಂದಿಗೆ ಅನೇಕ ಭಾಗದಲ್ಲಿ ಅಸಂಖ್ಯಾತ ಹಾಸ್ಟೆಲ್, ಶಾಲಾ-ಕಾಲೇಜು ಪ್ರಾರಂಭಿಸಿದ್ದವರು ಎಂದು ತಿಳಿಸಿದರು.
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಸಾಮಾಜಿಕವಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದರು. ವೈಯಕ್ತಿಕವಾಗಿ ಅವರ ಪೂಜಾ ಅನುಷ್ಠಾನ ಎಲ್ಲರಿಗೂ ಮಾದರಿ. ಸಾಮಾನ್ಯರಿಂದ ಹಿಡಿದು ಪ್ರಧಾನಮಂತ್ರಿಗಳವರೆಗೆ ಮಾತನಾಡುತ್ತಿದ್ದ ಅವರ ಶಕ್ತಿ, ಸಾಮರ್ಥಯ ಅಗಾಧ ಎಂದು ತಿಳಿಸಿದರು.
ನಿವೃತ್ತ ಇಂಜಿನಿಯರ್ ಆರ್. ಗುರುರಾಜ್ ಆಚಾರ್ ಮಾತನಾಡಿ, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಸಮಾಜದ ಶಕ್ತಿಯಾಗಿದ್ದರು. ಅವರು ಇದ್ದಾರೆ ಎಂದರೆ ಬ್ರಾಹ್ಮಣ ಸಮಾಜ ಧೈರ್ಯವಾಗಿ ಇರುತ್ತಿತ್ತು. ಸಮಾಜಕ್ಕೆ ಎಂತದ್ದೇ ಸಮಸ್ಯೆಗಳು ಎದುರಾದರೂ ಅವರ ಇರುವಿಕೆಯೇ ಬಹು ದೊಡ್ಡ ಧೈರ್ಯವಾಗಿತ್ತು. ಅಂತಹ ಮಹಾನ್ ಯತಿಗಳನ್ನು ಕಳೆದುಕೊಂಡಿರುವ ಸಮಾಜ ಅಕ್ಷರಶಃ ಅನಾಥವಾಗಿದೆ. ಮತ್ತೂಮ್ಮೆ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳಂತಹವರು ಹುಟ್ಟಿ ಬರಬೇಕು ಎಂದು ಪ್ರಾರ್ಥಿಸಿದರು.
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಸದಾ ಹಿಂದೂ ಧರ್ಮದ ಉಳಿವಿಗಾಗಿ ಸೆಣಸಾಡಿಸಿದವರು. ಅಂತಹವರ ಆದೇಶದಂತೆ ನಾನು ನಡೆದುಕೊಳ್ಳುತ್ತಿದ್ದೇನೆ ಎಂದರು. ಎಂ.ಜಿ. ಶ್ರೀಕಾಂತ್, ಶ್ಯಾಂ, ಸಿ.ಪಿ. ಆನಂದತೀರ್ಥಾಚಾರ್ ಇತರರು ಇದ್ದರು.
ಶ್ರೀಗಳಿಗೆ ಸಮರ್ಪಣೆ: ನಗರದ ಮಾಧ್ವ ಯುವಕ ಸಂಘದ 39ನೇ
ವಾರ್ಷಿಕೋತ್ಸವ ಮತ್ತು ಹರಿಕಥಾಮೃತಸಾರ ಪ್ರವಚನ ಮಾಲಿಕೆಯನ್ನು ಪೇಜಾವರ ಶ್ರೀಪಾದಂಗಳವರಿಗೆ ಸಮರ್ಪಿಸಲಾಯಿತು.