Advertisement

ನೇತಾಜಿ ಹೋರಾಟದ ಸಂಕೇತ

11:35 AM Jan 25, 2020 | Naveen |

ದಾವಣಗೆರೆ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಶ್ಚಂದ್ರ ಬೋಸ್‌ ಅನ್ಯಾಯ, ದಬ್ಟಾಳಿಕೆ ವಿರುದ್ಧ ಹೋರಾಟದ ಸಂಕೇತ ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ(ಕಮ್ಯೂನಿಸ್ಟ್‌) ರಾಜ್ಯ ಸಮಿತಿ ಸದಸ್ಯ ಡಾ| ಟಿ.ಎಸ್‌. ಸುನಿತ್‌ ಕುಮಾರ್‌ ಬಣ್ಣಿಸಿದ್ದಾರೆ.

Advertisement

ಗುರುವಾರ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್‌ನಿಂದ ಜಯದೇವ ವೃತ್ತದಲ್ಲಿ
ಏರ್ಪಡಿಸಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ನೇತಾಜಿ ಸುಭಾಶ್ಚಂದ್ರ ಬೋಸ್‌ ದೇಶದ ಪ್ರಜಾತಾಂತ್ರಿಕ ಹಾಗೂ ಧರ್ಮ ನಿರಪೇಕ್ಷಿತ
ತತ್ವಗಳಿಗಾಗಿ ತಮ್ಮ ಜೀವಮಾನವಿಡೀ ಶ್ರಮಿಸಿದರು ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರಿಂದ ಪ್ರೇರಣೆಗೊಂಡು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಅವರು ವೈಚಾರಿಕವಾಗಿ ಪ್ರಭಾವ ಬೀರುವುದರೊಂದಿಗೆ ಪ್ರಬಲ ರಾಷ್ಟ್ರ ನಿರ್ಮಾಣದ ವಿಚಾರಗಳಿಗೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.

ನೇತಾಜಿ ಸುಭಾಶ್ಚಂದ್ರ ಬೋಸ್‌ರವರ ದೃಷ್ಟಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಕೇವಲ ರಾಜಕೀಯ ಸ್ವಾತಂತ್ರ್ಯವಾಗಿರದೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ್ದಾಗಿತ್ತು. ಧರ್ಮ, ಜಾತಿ, ಜನರ ನಡುವಿನ ಪ್ರಾದೇಶಿಕ ವಿಭಜನೆ, ಕೋಮು ಕಲಹ, ಜಾತಿ ತುಳಿತ ಎಲ್ಲವೂಗಳಿಂದ
ಜನರು ಸ್ವಾತಂತ್ರ್ಯರಾಗಿರಬೇಕು ಎಂದು ಬಯಸಿದ್ದರು. ಅಂತಹ ಸ್ವತಂತ್ರ ಭಾರತದ ನಿರ್ಮಾಣಕ್ಕೆ ಹೋರಾಟ ಮಾಡಿದವರು ಎಂದು ಸ್ಮರಿಸಿದರು.

ಇತ್ತೀಚಿನ ದಿನಗಳಲ್ಲಿ ಹಿಂದೂ, ಮುಸ್ಲಿಂ ನಡುವಿನ ವ್ಯತ್ಯಾಸ ಕೃತಕ ನಿರ್ಮಾಣ.
ಆಳುವರು ಇದರಲ್ಲಿ ಕೈ ಜೋಡಿಸಿದ್ದಾರೆ. ಬ್ರಿಟಿಷರ ಆಗಮನಕ್ಕೂ ಮುನ್ನ ಭಾರತವನ್ನು ಹಿಂದೂಗಳು ಮತ್ತು ಮುಸ್ಲಿಂರು ಆಳಿದ್ದಾರೆ. ಆಗ ಹಿಂದೂ, ಮುಸ್ಲಿಂ ಘರ್ಷಣೆಯೇ
ತಿಳಿದಿರಲಿಲ್ಲ. ಅಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಆಶಿಸಿದರು. ಎಲ್ಲಾ ಕೋಮುಗಲಭೆಗಳ ಬೇರು ಆರ್ಥಿಕ ವ್ಯವಸ್ಥೆಯಲ್ಲಿ ಇದೆ ಎಂಬುದನ್ನು ಅಂದಿನ ಕ್ರಾಂತಿಕಾರಿಗಳು ಗಮನಿಸಿದ್ದರು.

Advertisement

ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂ-ಮುಸ್ಲಿಂರು ದಯನೀಯ ಆರ್ಥಿಕ ಶೋಷಣೆ
ಅನುಭವಿಸುವುದನ್ನು ನೇತಾಜಿ ನೋಡಿದ್ದರು. ಆರ್ಥಿಕ, ಸಾಮಾಜಿಕ ಶೋಷಣೆಯ ವಿರುದ್ಧ
ಹೋರಾಟ ಮಾಡಿದರು ಎಂದು ತಿಳಿಸಿದರು. ಯಾರು ಹಿಂದೂ ಮುಸ್ಲಿಂ ಆಸಕ್ತಿ ಒಂದೇ ಅಲ್ಲ ಎನ್ನುತ್ತಾರೋ ಅವರು ನಿಜವಾಗಿಯೂ ಸತ್ಯವನ್ನು ನುಡಿಯುತ್ತಿಲ್ಲ. ಹಸಿವು, ನಿರುದ್ಯೋಗ, ನಶಿಸಿ ಹೋಗುತ್ತಿರುವ ಕೈಗಾರಿಕೆಗಳು, ಅನಕ್ಷರತೆ ಎಲ್ಲವೂ ಮೂಲಭೂತ ಪ್ರಶ್ನೆಗಳು. ಹಿಂದೂ-ಮುಸ್ಲಿಂರಿಗೆ ಸಮಾನವಾಗಿ ಕಾಡುತ್ತಿರುವ ಸಮಸ್ಯೆಗಳು.

ಹಿಂದೂ-ಮುಸ್ಲಿಂ ಜಂಟಿ ಹೋರಾಟದಿಂದ ಮಾತ್ರ ಸ್ವಾತಂತ್ರ್ಯದ ಜಯಭೇರಿಯನ್ನು ಬಾರಿಸಲು ಸಾಧ್ಯ… ಎಂಬುದು ನೇತಾಜಿ ಸುಭಾಶ್ಚಂದ್ರ ಬೋಸ್‌ರ ಆಳವಾದ ಭಾವನೆ
ಆಗಿತ್ತು. ನಾವೆಲ್ಲರೂ ಅಪ್ರತಿಮ ವೀರನ ಮಾರ್ಗದರ್ಶನದಲ್ಲಿ ಸದೃಢ, ಸಶಕ್ತ ದೇಶ ನಿರ್ಮಾಣ ಮಾಡೋಣ ಎಂದು ತಿಳಿಸಿದರು.

ಎಐಡಿವೈಒ ಜಿಲ್ಲಾ ಅಧ್ಯಕ್ಷ ಮಧು ತೊಗಲೇರಿ, ಜ್ಯೋತಿ ಕುಕ್ಕುವಾಡ,
ಪರಶುರಾಮ್‌, ಸೌಮ್ಯ, ನಾಗಜ್ಯೋತಿ, ಪೂಜಾ, ಕಿರಣ್‌, ಕಾವ್ಯ, ಪುಷ್ಪಾ, ಸ್ವಪ್ನಾ,
ಹರಿಪ್ರಸಾದ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next